

ಕೊಪ್ಪಳ: ಶಿಕ್ಷಕರು ಮಕ್ಕಳಿಗೆ ಬೋಧನಾ ಕೌಶಲ ಕಲಿಸುವುದು ಸಾಮಾನ್ಯ. ಆದರೆ, ಮಕ್ಕಳೇ ಶಿಕ್ಷಕರಿಗೆ ವೇಗವಾಗಿ ಪಠ್ಯ ಮುಗಿಸುವುದು ಹೇಗೆಂದು ಕಲಿಸಿದ್ದು ವಿಶೇಷ.
ಹೌದು, ಕೊಪ್ಪಳದ ಬಿ.ಎನ್.ಆರ್.ಕೆ.ಕಾಲೇಜಿನಲ್ಲಿ ಬುಧವಾರ ಸಂಗೀತ, ಚಿತ್ರಕಲೆ, ನಾಟಕ, ಹೊಲಿಗೆ ಹಾಗೂ ವಿಶೇಷ ಶಿಕ್ಷಕರಿಗೆ ಮೆಮೊರಿ ಡೆವಲಪ್ಮೆಂಟ್ ಶೈಕ್ಷಣಿಕ ಕಾರ್ಯಾಗಾರ ನಡೆಸಲಾಯಿತು. ಶಿಕ್ಷಣ ತಜ್ಞ ಗೋಪಾಡ್ಕರ್ ಅವರ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿಶ್ವದಾಖಲೆ ಮಾಡಿದ 10 ಮಕ್ಕಳು ತಮ್ಮ ವಿಭಿನ್ನ ಕಲಿಕಾ ಕೌಶಲಗಳ ಮೂಲಕ 1 ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪಠ್ಯ ಮುಕ್ತಾಯ ಗೊಳಿಸುವುದು ಹೇಗೆ ಎಂಬುದನ್ನು ತರಬೇತಿ ನೀಡಿ ಗಮನ ಸೆಳೆದರು.
ಚಿತ್ರ, ಅಂಕಿ, ವಸ್ತು, ಪ್ರಶ್ನೆ, ಸಂಗೀತ, ಕಿಟಲೇ ಮಾಡಿದಾಗಲೂ ಅದನ್ನು ಗ್ರಹಿಸುವುದು ಹೇಗೆ ? ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು. ಕೇವಲ ಒಂದು ಚಿತ್ರದಲ್ಲಿ ಭಗವದ್ಗೀತೆ, ಒಂದು ಇಡೀ ಪಾಠ ಹೇಳಿಕೊಟ್ಟರು. ಕಬ್ಬಿಣದ ಕಡಲೆ ಎನಿಸಿದ ಗಣಿತ ವಿಷಯವನ್ನು ಜಾನಪದ, ಸಿನಿಮಾ ಹಾಡಿನ ಮೂಲಕ ಹೇಳಿದರು. ಸನ್ನೆಗಳು, ಕಣ್ಣಿನ ಸನ್ನೆ, ಕಾಲ್ಬೆರಳು, ನಗು ಸೇರಿ ವಿವಿಧ ದೈಹಿಕ ಭಾಷೆ ಬಳಸಿಯೂ ಕಲಿಕೆ ಸಾಧ್ಯ ಎಂದು ತೋರಿಸಿಕೊಟ್ಟರು. ಸಾಮಪ್ರದಾಯಿಕ ಶೈಲಿ ಬಿಟ್ಟು ಮಕ್ಕಳ ಬುದ್ಧಿಮತ್ತೆಗೆ ತಕ್ಕಂತೆ ಬೋಧನೆ ಮಾಡಬೇಕೆಂದು ವಿವರಿಸಿದರು.
ಮಕ್ಕಳ ಚಾಕಚಕ್ಯತೆಗೆ ಶಿಕ್ಷಕರು ನಿಬ್ಬೆರಗಾದರು. ಶಿಕ್ಷಕರಾಗಿದ್ದ ಗೋಪಾಡ್ಕರ್ ವೃತ್ತಿಗೆ ರಾಜೀನಾಮೆ ನೀಡಿ 1993ರಲ್ಲಿ ಸ್ವರೂಪ ಅಧ್ಯಯನ ಕೇಂದ್ರ ಆರಂಭಿಸಿದರು. ಇಲ್ಲಿ ಕಲಿತ 14 ಮಕ್ಕಳು 53 ವಿಶ್ವದಾಖಲೆ ಮಾಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಮಕ್ಕಳು, ಎಸ್ಸೆಸ್ಸೆಲ್ಸಿ ಪಠ್ಯವನ್ನು ಒಂದು ತಿಂಗಳಲ್ಲಿ ಮಕ್ಕಳಿಗೆ ಶಾಶ್ವತವಾಗಿ ನೆನಪುಳಿಯುವಂತೆ ಬೋಧಿಸುವುದು ಹೇಗೆ ಎಂಬುದನ್ನು ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ.