ಮಕ್ಕಳ ಕಾಣೆ ಪ್ರಕರಣ ಅಪಹರಣವೆಂದು ಪರಿಗಣಿಸಿ

district koppal sp dr.ram child kidnap case review
Published on

ಕೊಪ್ಪಳ: ಸುಪ್ರೀಂ ಕೋರ್ಟ್​ ನಿರ್ದೇಶನದಂತೆ ಮಕ್ಕಳ ಕಾಣೆ ಪ್ರಕರಣಗಳನ್ನು ಅಪಹರಣವೆಂದು ದಾಖಲಿಸಿ ತನಿಖೆ ಕೈಗೊಳ್ಳುವಂತೆ ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಸೂಚಿಸಿದರು.

ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಅಪಹರಣಕ್ಕೊಳಗಾದ ಮತ್ತು ಕಾಣೆಯಾದ ಮಕ್ಕಳ ಪತ್ತೆಗಾಗಿ ನೂತನವಾಗಿ ರಚನೆಯಾದ ವಿಶೇಷ ಕಾರ್ಯಪಡೆ ಸಭೆ ನಡೆಸಿ  ಮಾತನಾಡಿದರು.

ಮಕ್ಕಳ ನಾಪತ್ತೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೊಪ್ಪಳದಲ್ಲಿ ದಾಖಲಾದ ಬಹುತೇಕ ಪ್ರಕರಣಗಳು ಪ್ರೇಮ ಪ್ರಕರಣಗಳಾಗಿವೆ. ಸಮ್ಮತಿಯೊಂದಿಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿಯೂ ಅಪ್ರಾಪ್ತರನ್ನು ಪುಸಲಾಯಿಸಿ ಕರೆದುಕೊಂಡು ಹೋದರೂ ಅಪಹರಣವಾಗಲಿದೆ. ಈ ಬಗ್ಗೆ ಎಲ್ಲ ಶಾಲಾ&ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ. ತೆರೆದ ಮನೆ ಕಾರ್ಯಕ್ರಮ ಮೂಲಕ ಜನರಿಗೆ ಅರಿವು ಮೂಡಿಸಿ ಎಂದು ಪೊಲೀಸ್​ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಎಡಿಸಿ ಸಿದ್ರಾಮೇಶ್ವರ ಮಾತನಾಡಿ, ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟದಲ್ಲಿ ಮಹಿಳೆ, ಮಕ್ಕಳ ಅನೈತಿಕ ಸಾಗಣೆ ತಡೆ ಸಮಿತಿ ರಚಿಸಲಾಗಿದೆ. ಸಮಿತಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಬೀಟ್​ ಪೊಲೀಸರು ಸಮಿತಿಯಲ್ಲಿ ಭಾಗಿಯಾಗಿ ಎಂದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ಮಾತನಾಡಿ, ಮಕ್ಕಳಿಗೆ ಅವರ ಪರವಾದ ಕಾನೂನಿನ ಅರಿವು ಮೂಡಿಸಿ. ಅವರನ್ನು ಪ್ರಜ್ಞಾವಂತರಾಗಿಸಿದಲ್ಲಿ ಅಪರಾಧ ತಡೆಗಟ್ಟಬಹುದಾಗಿದೆ. ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಿರಿ ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿದರು. ಎಎಸ್ಪಿ ಹೇಮಂತ್​ ಕುಮಾರ್​, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ್​ ಶೆಟ್ಟೆಪ್ಪನವರ್​, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಪ್ರಕಾಶ ಕಡಗದ್​, ಸದಸ್ಯೆ ದಿವ್ಯಾ ಜೋಗಿ, ಬಾಲ ನ್ಯಾಯ ಮಂಡಳಿಯ ಸದಸ್ಯರಾದ ರವಿ ಗುಡ್ಡದಮೇಗಳ, ನೇತ್ರಾ ಪಾಟೀಲ್​, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿ ಆಶಾ, ಜೈ ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net