ಕೊಪ್ಪಳ: ಜಮಾಅತೆ ಇಸ್ಲಾಮಿ ಹಿಂದ್ನಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ ಸೀರತ್ ಅಭಿಯಾನ ಸೆ.3ರಿಂದ 14ವರೆಗೆ ರಾಜ್ಯಾದ್ಯಂದ ಅಭಿಯಾನ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲೂ ಕಾರ್ಯಕ್ರಮ ನಡೆಯಲಿವೆ ಎಂದು ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ಇಲಿಯಾಸ ನಾಲಬಂದ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುಸ್ಲಿಂ ಸಮುದಾಯದ ವಿವಿಧ ಸಂ&ಸಂಸ್ಥೆಗಳ ಸಹಯೋಗದಲ್ಲಿ ಸಲಹಾ ಸಮಿತಿ ರಚಿಸಲಾಗುವುದು. ಸೆ.5ರಂದು ಪ್ರವಾದಿ ಮುಹಮ್ಮದರನ್ನು ಅರಿಯಿರಿ ಮತ್ತು ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ ಆದರ್ಶದ ಔಚಿತ್ಯ ಪುಸ್ತಕಗಳ ಬಿಡುಗಡೆ ಇರಲಿದೆ. ಜತೆಗೆ ಗಣ್ಯರು, ಸಾಹಿತಿಗಳು, ವೈದ್ಯರು, ಉಪನ್ಯಾಸಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಕ್ರಿಯರಾದವರನ್ನು ಭೇಟಿಯಾಗಿ ಅಭಿಯಾನ ಪರಿಚಯಿಸಲಾಗುವುದು ಎಂದರು.
ಸೆ.20ರಂದು ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ ರೈಲ್ವೆ ನಿಲ್ದಾಣ ರಸ್ತೆಯ ಮಸ್ಜಿದೆ ಅಲಾ ಸಭಾಂಗಣದಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗುವುದು. ಜತೆಗೆ ಸಾರ್ವಜನಿಕ ಸ್ಥಳ, ವಾರ್ಡ್ಗಳು, ಶಾಲಾ&ಕಾಲೇಜುಗಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು. ಸೆ.6ರಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ವಿತರಿಸುತ್ತೇವೆ. ಸೆ.10ರಂದು ವೃದ್ಧಾಶ್ರಮಕ್ಕೆ ಭೇಟಿ ಇರಲಿದೆ. ಭಾಗ್ಯನಗರ, ಮುನಿರಾಬಾದ್, ಗಿಣಿಗೇರಾ, ಕಿನ್ನಾಳ, ಗೊಂಡಬಾಳ, ಕುದರಿಮೋತಿ, ಮಂಗಳೂರು, ಹಾಲಳ್ಳಿ, ಕೋಳೂರು, ಹನಕುಂಟಿ, ಲಾಚನಕೇರಾ ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ. ಸನ್ಮಾರ್ಗ ವಾರಪತ್ರಿಕೆ ವಿಶೇಷಾಂಕ, ಮಹಿಳೆಯರಿಗಾಗಿ ಇರುವ ಅನುಪಮಾ ಮಾಸಪತ್ರಿಕೆ ವಿಶೇಷಾಂಕ ಬಿಡುಗಡೆ ಮಾಡಲಾಗುವುದೆಂದು ಮಾಹಿತಿ ನೀಡಿದರು.
ಪ್ರಮುಖರಾದ ಲಾಯಕ್ ಅಲಿ, ಸೈಯದ್ ಇದಾಯತ್ ಅಲಿ, ಹಸಗರ್ಖಾನ್ ಇತರರಿದ್ದರು.