

ಕೊಪ್ಪಳ: ಶಿವಯೋಗಿ ಸಿದ್ಧರಾಮೇಶ್ವರರು 12ನೇ ಶತಮಾನದ ಪ್ರಸಿದ್ಧ ಸಮಾಜ ಸುಧಾರಕರಾಗಿದ್ದರು ಎಂದು ಕನ್ನಡ ಪ್ರಾಧ್ಯಾಪಕ ಅರವಿಂದ ಎಸ್.ವಡ್ಡರ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಶರಣರ ಯುಗಕ್ಕು ಮುನ್ನ ನಾಡಿನಲ್ಲಿ ಮೌಢ್ಯತೆ, ರಾಜ್ಯ ಪ್ರಭುತ್ವದೊಳಗೆ ಗುಲಾಮಗಿರಿಯ ಅಟ್ಟಹಾಸ ನಡೆದಿತ್ತು. ಜಾತಿ ವ್ಯವಸ್ಥೆ ತುಂಬಿ ಜನರು ಶೋಷಣೆಗೆ ಒಳಗಾಗಿದ್ದರು. ಬಸವಾದಿ ಶರಣರ ಹೋರಾಟದಿಂದ ಕಲ್ಯಾಣ ಕ್ರಾಂತಿ ಸಂಭವಿಸಿತು. ಸಮಾಜ ಸುಧಾರಣೆಯ ಪ್ರತಿಫಲವಾಗಿ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಬೆಳಕು ನೀಡಿದ್ದಾರೆ. ಅಂತಹ ಮಹನೀಯರಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ವಿಶಿಷ್ಟ ವಚನಕಾರರಾಗಿ ರೂಪಗೊಂಡವರು ಮಹಾನ್ ಶರಣ ಶಿವಯೋಗಿ ಸಿದ್ಧರಾಮೇಶ್ವರ ಎಂದರು.
ಭೋವಿ ಸಮುದಾಯ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಮಾಸ್ತೆಪ್ಪ ಕಟ್ಟಿಮನಿ, ರಾಮಣ್ಣ ಪೂಜಾರ, ರಮೇಶ ಬಸಾಪಟ್ಟಣ, ರಾಮಣ್ಣ ಅಳವಂಡಿ, ಉಚ್ಚಪ್ಪ ಭೋವಿ, ಲಕ್ಷಮಣ ಪೂಜಾರ, ಹೊನ್ನಪ್ಪ ಭೋವಿ, ದುರ್ಗಪ್ಪ ಮ್ಯಾಗೇರಿ ಇತರರಿದ್ದರು.