ಕೊಪ್ಪಳದಾದ್ಯಂತ ಶಿವರಾತ್ರಿ ಸಂಭ್ರಮ

district koppal shivaratri festival celebration shiva temples
Published on

ಕೊಪ್ಪಳ: ಮಹಾಶಿವರಾತ್ರಿ ಅಂಗವಾಗಿ ನಗರದಲ್ಲಿ ಬುಧವಾರ ಎಲ್ಲೆಡೆ ಧಾರ್ಮಿಕ ಸಂಭ್ರಮ ಕಂಡುಬಂತು. ವಿವಿಧ ದೇವಾಲಯಗಳಲ್ಲಿ ಶಿವನಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು.

ನಗರದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಬೆಳಗ್ಗೆ ಶಿವಲಿಂಗಕ್ಕೆ ರುದ್ರಾಭಿಷೇಕ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಅಭಿಷೇಕದಲ್ಲಿ ಭಾಗಿಯಾದ ನಮಿಸಿದರು. ಸಂಜೆ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉಪವಾಸ ವ್ರತ ಕೈಗೊಂಡ ಭಕ್ತರಿಗೆ ವಗ್ಗರಣೆ, ಮಿರ್ಚಿ ಪ್ರಸಾದ ವಿತರಣೆ ನಡೆಯಿತು. 75 ಚೀಲ ಮಂಡಕ್ಕಿ ವಗ್ಗರಣೆ ಮಾಡಲಾಯಿತು. ಸಂಜೆ ಅಂತಾರಾಷ್ಟ್ರೀಯ ಜಾನಪದ ಕಲಾವಿದ ಜೀವನ ಸಾಬ ಬಿನ್ನಾಳ ತಂಡ ಜನಪದ ಗೀತೆಗಳನ್ನು ಹಾಡುವ ಮೂಲಕ ನೆರೆದ ಭಕ್ತರನ್ನು ರಂಜಿಸಿತು. ಹುಬ್ಬಳ್ಳಿಯ ಖ್ಯಾತ ಸಂಗೀತ ಕಲಾವಿದ ಮಂಜುನಾಥ ಹೊಸ್ವಾಲ್​ ತಂಡ ಹಲವು ಮಧುರ ಭಾವಗೀತೆಗಳನ್ನು ಹಾಡಿ ಭಕ್ತರ ಮನಸೂರೆಗೊಂಡಿತು.

ವಾರ್ಷಿಕೋತ್ಸವ: ನಗರದ ಎನ್​ಜಿಒ ಕಾಲನಿ ಈಶ್ವರ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಜರುಗಿತು. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಪ್ರಸಾದಕ್ಕೆ ಚಾಲನೆ ನೀಡಿದರು. ಮೈನಳ್ಳಿ ಸಿದ್ದೇಶ್ವರ ಮಹಾಸ್ವಾಮಿಗಳು ರುದ್ರಾಭಿಷೇಕ ಪೂಜೆ ನೆರವೇರಿಸಿದರು.

ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಚಿಣ್ಣರಿಗೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಯಿತು. ಲಚ್ಚಣ್ಣ ಹಳೇಪೇಟೆ, ಕೃಷ್ಣ ಸೊರಟೂರ, ರೇಖಾ ಸವಡಿ ಅವರ ಸಂಗೀತ ಕಾರ್ಯಕ್ರಮ ಜನರ ಮನ ಗೆದ್ದಿತು. ಹೆಬ್ಬಾಳ ನಾಗಭೂಷಣ ಶಿವಾಚಾರ್ಯ ಸ್ವಾಮಿ ಆಶಿರ್ವಚನ ನೀಡಿದರು. ವಾರ್ಷಿಕೋತ್ಸವ ಅಂಗವಾಗಿ ಶಿವಶಕ್ತಿ ಮಹಿಳಾ ಮಂಡಳಿಗೆ ಪದಾಧಿಕಾರಿಗಳನ್ನು ರಚಿಸಲಾಯಿತು.

ದೇವಸ್ಥಾನ ಸಮಿತಿ ಪದಾಧಿಕಾರಿಗಳು ರೇವಯ್ಯ ಪೂಜಾರ, ರವಿ ವಾಲ್ಮೀಕಿ, ಸಂಗಪ್ಪ ಹಾಲ್ಯಾಳ, ಪಾಲಾಕ್ಷಪ್ಪ, ನಾಗರಾಜನಾಯಕ ಡೊಳ್ಳಿನ, ರಾಘವೇಂದ್ರ ದೇಶಪಾಂಡೆ, ಮಲ್ಲಿಕಾರ್ಜುನ ಕಾರವಾರಮಠ ಇತರರಿದ್ದರು.

ಶಿವರಾತ್ರೇಶ್ವರನ ಆರಾಧನೆ : ಕೊಪ್ಪಳದ ಕೇದಾರನಾಥ ಎಂದೇ ಪ್ರಸಿದ್ಧವಾದ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವೈಭವ ಅದ್ದೂರಿಯಾಗಿ ನೆರವೇರುತ್ತಿದೆ. ಕಳೆದೆರೆಡು ದಿನದಿಂದ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ಬುಧವಾರ ಬೆಳಗ್ಗೆಯೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಇತರ ಧಾರ್ಮಿಕ ಚಟುವಟಕೆಗಳು ನೆರವೇರಿದವು. ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನದೆಡೆ ಧಾವಿಸಿದರು. ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದರು. ಸಂಜೆಯೂ ವಿವಿಧ ಕಾರ್ಯಕ್ರಮ ನೆರವೇರಿದವು.

ಜ್ಯೋರ್ತಿಲಿಂಗ ಪ್ರತಿಷ್ಠಾಪನೆ: ನಗರದ ಈಶ್ವರ ಗುಡಿಯಲ್ಲಿ ಶಿವರಾತ್ರಿ ಅಂಗವಾಗಿ ಪ್ರಜಾಪಿತ ಈಶ್ವರಿಯ ವಿವಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಜ್ಯೋರ್ತಿಲಿಂಗ ಪ್ರತಿಷ್ಠಾಪಿಸಲಾಗಿದೆ. ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವೇದಿಕೆ ಕಾರ್ಯಕ್ರಮ ನೆರವೇರಿಸಲಾಯಿತು. ವಿವಿಧ ಗಣ್ಯರು ಭೇಟಿ ನೀಡಿ ಶಿವನ ದರ್ಶನ ಪಡೆದರು. ಸಾರ್ವಜನಿಕರು ಬೆಳಗ್ಗೆಯಿಂದಲೇ ಜ್ಯೋರ್ತಿಲಿಂಗಗಳನ್ನು ಕಂಡು ಪಾವನವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net