

ಕೊಪ್ಪಳ: ಆದಿಗುರು ಶಂಕರಾಚಾರ್ಯರ ಆದರ್ಶಗಳು ನಮಗೆಲ್ಲ ದಾರಿದೀಪ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಶಂಕರ ಸಾಂಸತಿಕ ಭವನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಂಕರಾಚಾರ್ಯರ ಬಗ್ಗೆ ನಾವೆಲ್ಲ ಅರಿಯಬೇಕು. ಅವರು ಹೇಳಿಕೊಟ್ಟ ಮಾರ್ಗದಲ್ಲಿ ಸಾಗಿದಲ್ಲಿ ಜೀವನ ಸಾರ್ಥಕ ಆಗಲಿದೆ. ಅಂಥ ದಾರ್ಶನಿಕರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಸುಯೋಗ. ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಾನು ಸಹಕಾರ ನೀಡುವೆ. ಸಮುದಾಯ ಭವನಕ್ಕೆ ಅನುದಾನ ನೀಡಲಾಗಿದೆ. ಅದನ್ನು ಬಳಸಿ ಸುಂದರವಾಗಿ ಭವನ ನಿರ್ಮಿಸಿದ್ದು ಖುಷಿ ಎನಿಸತ್ತಿದೆ. ಮಹನೀಯರ ಜಯಂತಿ ಆಚರಣೆಗೆ ಸೀಮಿತವಾಗದಿರಲಿ. ಎಲ್ಲ ಧರ್ಮಗಳು ಒಳ್ಳೆಯದನ್ನೇ ಪ್ರತಿಪಾದಿಸಿವೆ. ಹಿಂದು ಧರ್ಮದಲ್ಲಿ ಸಂಬಂಧಗಳಿಗೆ ಮಹತ್ವವಿದೆ. ಸಂಸ್ಕಾರವಿದೆ. ಶಿಕ್ಷಣ, ಜೀವನ ವಿಧಾನ ಹೇಗಿರಬೇಕೆಂದು ತಿಳಿಸಿದೆ. ಇದೇ ಕಾರಣಕ್ಕೆ ಜಗತ್ತಿನ ಇತರ ರಾಷ್ಟ್ರದವರು ಹಿಂದು ಧರ್ಮವನ್ನು ಪ್ರೀತಿಸುತ್ತಾರೆ. ನಮ್ಮ ಧಾರ್ಮಿಕ ಆಚರಣೆ ಇಂದಿಗೂ ಜೀವಂತ ಇವೆ ಎಂದರು.
ಹರಿಹರದ ನಿವೃತ್ತ ಪ್ರಾಧ್ಯಾಪಕ ವಿದ್ಯಾನಾಥ ಶಾಸ್ತ್ರಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಸಮುದಾಯ ಮುಖಂಡರಾದ ಡಿ.ವಿ ಜೋಷಿ, ರವಿ ಪುರೋಹಿತ, ರಮೇಶ ಕೆ., ಅಶೋಕ ವಿ., ಕೃಷ್ಣ ವಿ., ವೆಂಕಟೇಶ ವಿ., ಸುರೇಶ್ ಪಿ.ನಾಡಿಗಾರ ಇತರರಿದ್ದರು.