ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಆಗುತ್ತಿದೆ ಅನ್ಯಾಯ

Published on

ಕೊಪ್ಪಳ: ನಿಯಮಾವಳಿಯಂತೆ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ ನೀಡಬೇಕು. ಆದರೆ, ಜಿಲ್ಲೆಯಲ್ಲಿ ಪ್ಯಾಕೇಜ್​ ಮೂಲಕ ಅನ್ಯಾಯ ಮಾಡುತ್ತಿದ್ದಾರೆಂದು ಕಲ್ಯಾಣ ಕರ್ನಾಟಕ ಜಿಲ್ಲಾ ಸಿವಿಲ್​ ಗುತ್ತಿಗೆದಾರರ ಸಂಘದ (ಪ.ಜಾ/ಪ.ಪ)ವಿಭಾಗೀಯ ಅಧ್ಯಕ್ಷ ಸಿದ್ದು ಮಣ್ಣಿನವರ ಆರೋಪಿಸಿದರು.

ಸರ್ಕಾರ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಶೇ.24.10ರಷ್ಟು ಮೀಸಲು ನೀಡಿದೆ. 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗಿನ ಕಾಮಗಾರಿ ನಮಗೆ ನೀಡಬೇಕು. ಈ ಮೂಲಕ ಸರ್ಕಾರ ನಮ್ಮ ಜೀವನೋಪಾಯಕ್ಕೆ ಅನುಕೂಲ ಮಾಡಿದೆ. ಆದರೆ, ಕೆಕೆಆರ್​ಡಿಬಿ ಕಾರ್ಯದರ್ಶಿ, ಡಿಸಿ, ಲೋಕೋಪಯೋಗಿ ಅಧಿಕಾರಿಗಳು ಸಣ್ಣ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಮೀಸಲಾತಿ ಅನ್ವಯ ಟೆಂಡರ್​ ಕರೆಯಬೇಕು. ಆದರೆ, ನಿಯಮ ಉಲ್ಲಂಘಿಸಿ, ಕಾಮಗಾರಿ ಒಟ್ಟುಗೂಡಿಸಿ ಪ್ಯಾಕೇಜ್​ ಮಾದರಿಯಲ್ಲಿ ಟೆಂಡರ್​ ಕರೆಯುತ್ತಿದ್ದಾರೆ. ಇದರಿಂದ ಟೆಂಡರ್​ನಲ್ಲಿ ಭಾಗವಹಿಸಲು ನಮಗೆ ಅವಕಾಶ ಸಿಗುವುದಿಲ್ಲ. ಶಾಸಕ, ಸಚಿವರು ಇವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. 1 ಕೋಟಿ ರೂ. ಒಳಗಿದ್ದರೆ ನಮಗೆ ನೀಡಬೇಕೆನ್ನುವ ಕಾರಣಕ್ಕೆ ನಾಲ್ಕೆ$ದು ಕಾಮಗಾರಿ ಒಟ್ಟುಗೂಡಿಸಿ ಟೆಂಡರ್​ ಕರೆಯುತ್ತಿದ್ದಾರೆ. ಯಲಬುರ್ಗಾ ತಾಲೂಕಿನಲ್ಲಿ ಹೀಗೆ ಮಾಡಿದ್ದಾರೆಂದು ತಿಳಿಸಿದರು. ತಕ್ಷಣ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗುತ್ತಿಗೆದಾರರಾದ ದ್ಯಾಮಣ್ಣ ಭಜಂತ್ರಿ, ಪ್ರಶಾಂತ ನಾಯಕ, ನಿಂಗಪ್ಪ ಗದ್ದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net