ಒಳ ಮೀಸಲಾತಿ ಜಾರಿ ಮಾಡಬೇಕು

Published on

ಕೊಪ್ಪಳ: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದನ್ನು ಖಂಡಿಸಿ ಡಿ.16ರಂದು ಬೆಳಗಾವಿಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಅದಕ್ಕೂ ಮುನ್ನಾ ಡಿ.14ರಂದು ರಾಜ್ಯದ ಎಲ್ಲ ಶಾಸಕರ ಮನೆ ಮುಂದೆ ತಮಟೆ ಚಳವಳಿ ನಡೆಸಲಿದ್ದೇವೆಂದು ಮಾದಿಗ, ಸಮಗಾರ, ಮಚಗಾರ, ಡೊಹರ, ಡಕ್ಕಲಿಗ ಜಾತಿ, ಉಪಜಾತಿ ಸಂಟನೆಗಳ ಒಕ್ಕೂಟ ಸಂಚಾಲಕ ಗಣೇಶ ಹೊರತಟ್ನಾಳ ತಿಳಿಸಿದರು.

ನ್ಯಾ.ಸದಾಶಿವ ಆಯೋಗ ವರದಿ ಒಳಮೀಸಲಾತಿ ಹಂಚಿಕೆ ಮಾಡಿದೆ. ಸುಪ್ರೀಂ ಕೋರ್ಟ್​ ಸಹ ಕೆಲ ತಿಂಗಳ ಹಿಂದೆ ಆಯಾ ರಾಜ್ಯ ಸರ್ಕಾರಗಳು ಒಳ ಮೀಸಲು ಜಾರಿ ಮಾಡಬಹುದೆಂದು ತಿಳಿಸಿದೆ. ಆದರೂ ರಾಜ್ಯದಲ್ಲಿ ಜಾರಿ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದ ಮೊದಲ ಸಂಪುಟದಲ್ಲೇ ಜಾರಿ ಮಾಡುವುದಾಗಿ ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಮತ್ತೊಂದು ಆಯೋಗ ರಚಿಸಿ ಕಾಲಹರಣ ಮಾಡುತ್ತಿದ್ದಾರೆ. ಆಯೋಗ ಘೋಷಿಸಿ ಇಷ್ಟು ದಿನವಾದರೂ ಕಾರ್ಯ ಆರಂಭಿಸಿಲ್ಲವೆಂದು ಆರೋಪಿಸಿದರು.

ಸರ್ಕಾರದ ನಡೆ ಖಂಡಿಸಿ ಡಿ.16ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಂಡಿದ್ದೇವೆ. ಇದಕ್ಕು ಮುನ್ನ ಡಿ.14ರಂದು ಎಲ್ಲ ಶಾಸಕರ ಮನೆ ಮುಂದೆ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಜಿಲ್ಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ನಾವೆಲ್ಲ ತೆರಳಲಿದ್ದೇವೆ. ನಮ್ಮ ಹಕ್ಕು ಜಾರಿಗೆ ಒತ್ತಾಯಿಸಲಿದ್ದೇವೆಂದು ಹೇಳಿದರು. ಸಂಚಾಲಕರಾದ ಸಿದ್ದು ಮಣ್ಣಿನವರ, ಮಂಜುನಾಥ ಮಿಸಲಾಪುರ, ನಾಗಲಿಂಗ ಮಾಳೆಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net