

ಕೊಪ್ಪಳ: ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಅಕ್ರಮ ತಡೆಗೆ ಒತ್ತಾಯಿಸಿ ಬಿಜೆಪಿ ನಿಯೋಗ ಬುಧವಾರ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹಾಗೂ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ ಸಲ್ಲಿಸಿತು.
ಹಿರೇಹಳ್ಳ, ಕಾಸನಕಂಡಿ ಬಳಿ ಮರಳು, ಹೂಳು ಅಕ್ರಮ ಎಗ್ಗಿಲ್ಲದೆ ನಡೆದಿದೆ. ಜೂನ್ನಲ್ಲಿ ಹಿರೇ ಸಿಂದೋಗಿ ಬಳಿ ದಾಳಿ ನಡೆದಿದೆ. ಅಷ್ಟಾದರೂ ಕ್ರಮವಾಗಿರಲಿಲ್ಲ. ಬಳಿಕ ನಾವು ಮನವಿ ನೀಡಿದಾಗ ಪ್ರಕರಣ ದಾಖಲಿಸಲಾಗಿದೆ. ಇದೀಗ ಮತ್ತೆ ಅಕ್ರಮ ದಂಧೆ ಜೋರಾಗಿದೆ. ಕಾಸನಕಂಡಿ ಬಳಿ ಗುತ್ತಿಗೆದಾರರೊಬ್ಬರು ರಾಜಾರೋಷವಾಗಿ ಅಕ್ರಮ ನಡೆಸಿದ್ದಾರೆ. ಕೆಲ ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಣ್ಮುಚ್ಚಿ ಕುಳಿತಿದ್ದಾರೆ. ಅಂಥ ಅಧಿಕಾರಿಗಳ ವಿರುದ್ಧವೂ ಯಾವುದೇ ಕ್ರಮ ಆಗದಿರುವುದು ವಿಷಾದನೀಯ ಎಂದು ಆರೋಪಿಸಿದರು.
ಪ್ರಾಕೃತಿ ಸಂಪತ್ತನ್ನು ಸಮಾಜಘಾತುಕರು, ಅಕ್ರಮಕೋರರು ಕೊಳ್ಳೆ ಹೊಡೆಯುತ್ತಿದ್ದಾರೆ. ತಕ್ಷಣ ಅವರಿಗೆ ಕಡಿವಾಣ ಹಾಕಬೇಕು. ಮರಳು ಅಕ್ರಮ ದಂಧೆ ತಡೆಯಬೇಕು. ಮರಳು, ಹೂಳೂ ಅಕ್ರಮವಾಗಿ ಸಾಗಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಪ್ರಮುಕರಾದ ಚಂದ್ರು ಕವಲೂರು, ಗಣೇಶ ಹೊರತಟ್ನಾಳ, ಸೋಮಣ್ಣ ಹಳ್ಳಿ, ಪ್ರಸಾದ್ ಗಾಳಿ ಇತರರಿದ್ದರು.