ಕೊಪ್ಪಳ: ನಾಡಿದ್ದು (ಅ.18) ನಗರದ ತಾಲೂಕು ಕ್ರೀಡಾಂಗಣದಲ್ಲಿ ಪ್ರವಾದಿ ಮಹಮ್ಮದ್ ಪೈಗರಂಬರ್ ಅವರ 1500ನೇ ಜನ್ಮ ದಿನ ಹಾಗೂ ವಿಶ್ವಶಾಂತಿ ಸಂದೇಶ ಸಾರುವ ದೃಷ್ಟಿಯಿಂದ ಬೃಹತ್ ಸೌಹಾರ್ದ ಸಮಾವೇಶ ಆಯೋಜಿಸಲಾಗಿದೆ ಎಂದು ವಿಪ ಮುಖ್ಯ ಸಚೇತಕ ಸಲೀಂ ಅಹಮದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೊಂದು ಐತಿಹಾಸಿಕ ಕಾರ್ಯಕ್ರಮ. ಸಂಜೆ 6.30ಕ್ಕೆ ಆರಂಭವಾಗಲಿದೆ. ಕಲಬುರ್ಗಿಯ ಖಾಜಾಬಂದೇನವಾಜ್ ದರ್ಗಾ ಗುರುಗಳು, ಶಿರಹಟ್ಟಿ ಕೀರ ದಿಂಗಾಲೇಶ್ವರ ಶ್ರೀಗಳು, ಕಲಬುರ್ಗಿ ದೊಡ್ಡಬಸಪ್ಪ ಅಪ್ಪ ಸೇರಿ ಇತರ ಶ್ರೀಗಳು ಭಾಗಿಯಾಗುವರು. ಅಳವಂಡಿ ಶ್ರೀಗಳು, ಗವಿಮಠದ ಗವಿಶ್ರೀಗಳಿಗೂ ಆಹ್ವಾನ ನೀಡಿದ್ದೇವೆ. ಸೂಫಿ&ಸಂತರ ಸಮಾವೇಶ ಆಗಿದ್ದು, ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ. ರಾಜಕೀಯ ಭಾಷಣಗಳಿರುವುದಿಲ್ಲ. ಬೇಡಿಕೆ ಸಲ್ಲಿಕೆ, ಆಗ್ರಹ, ಬಲ ಪ್ರದರ್ಶನಕ್ಕಾಗಿ ಮಾಡುತ್ತಿಲ್ಲವೆಂದರು.
ಸಚಿವರಾದ ಎಚ್.ಕೆ.ಪಾಟೀಲ್, ಸತೀಶ ಜಾರಕಿಹೊಳಿ, ಶಿವರಾಜ ತಂಗಡಗಿ, ರಹಿಂ ಖಾನ್, ಕ್ರಿಕೆಟಿಗ ಅಜರುದ್ದಿನ್, ವಿಪ ಸದಸ್ಯ ಬಿ.ಕೆ.ಹರಿಪ್ರಸಾದ, ಶಾಸಕರಾದ ಹಂಪನಗೌಡ ಬಾದರ್ಲಿ, ರಾವೇಂದ್ರ ಹಿಟ್ನಾಳ, ಎಚ್.ಆರ್.ಗವಿಯಪ್ಪ, ಸಂಸದ ರಾಜಶೇಖರ ಹಿಟ್ನಾಳ, ಗಣ್ಯರಾದ ಸಂಗಣ್ಣ ಕರಡಿ, ಇಕ್ಬಾಲ್ ಅನ್ಸಾರಿ, ಎಚ್.ಆರ್.ಶ್ರೀನಾಥ, ಅಮರೇಗೌಡ ಬಯ್ಯಾಪುರ, ಹಸನ್ಸಾಬ್ ದೋಟಿಹಾಳ ಇತರರು ಆಗಮಿಸುವರು.
ಕೋಮು ಸಾಮರಸ್ಯ ಕಾಪಾಡಲು, ಪ್ರವಾದಿ ಮಹಮ್ಮದ್ ಪೈಗಂಬರ್ ಸಂದೇಶ ತಿಳಿಸುವ ಉದ್ದೇಶಕ್ಕೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ನೂರಾರು ವರ್ಷದಿಂದ ಅವಿನಾಭಾವ ಸಂಬಂಧದಿಂದ ಬಾಳುತ್ತಿದ್ದೇವೆ. ಅದನ್ನು ಮುಂದುವರೆಸಬೇಕಿದೆ. ಕಲಬುರ್ಗಿ ಗುರುಗಳು ಮೊದಲ ಬಾರಿಗೆ ಕೊಪ್ಪಳಕ್ಕೆ ಬರುತ್ತಿದ್ದು, ಅವರನ್ನು ಸನ್ಮಾನಿಸುವ ಬದಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಬಸವರಾಜ ಹಿಟ್ನಾಳ, ಪ್ರಮುಖರಾದ ಡಿ.ಬಸವರಾಜ, ಅಲ್ತಾಪ್ ಕಿತ್ತೂರು, ಎಸ್.ಡಿ.ಮಕಾಂದಾರ, ಕೆ.ಎಂ.ಸೈಯ್ಯದ್, ಎಂ. ಕಾಟನ್ ಪಾಷಾ, ಮಾನ್ವಿ ಪಾಷಾ, ಬಾಷುಸಾಬ್ ಖತೀಬ್ ಇತರರಿದ್ದರು.