

ಕೊಪ್ಪಳ: ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷಿ$್ಮಕಾಂತ ನಾಲ್ವಾರ ವರ್ಗಾವಣೆಗೆ ಆಗ್ರಹಿಸಿ ಜು.22ರಿಂದ ಆರ್ಟಿಒ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕರವೇ ಜನಸೇನೆ ಜಿಲ್ಲಾಧ್ಯಕ್ಷ ಬಸವರೆಡ್ಡಿ ಶಿನಗೌಡ್ರ ತಿಳಿಸಿದರು.
ಲಕ್ಷಿ$್ಮಕಾಂತ ನಾಲ್ವಾರ ಜಿಲ್ಲೆಗೆ ಬಂದು ನಾಲ್ಕು ವರ್ಷವಾಗಿದೆ. ನಿಯಮಾವಳಿಯಂತೆ ಎರಡು ವರ್ಷಕ್ಕೆ ವರ್ಗಾಯಿಸಬೇಕು. ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇಲ್ಲದ ನೆಪ ಹೇಳಿ ಗಾಡಿ ಮಾಲೀಕರಿಗೆ ತೊಂದರೆ ಕೊಡುತ್ತಿದ್ದಾರೆ. ಏಜೆಂಟ್ಗಳ ಮೂಲಕ ಹೋದರೆ ಮಾತ್ರ ಇಲಾಖೆ ಸೇವೆ ಸಿಗುತ್ತದೆ. ಇಲ್ಲದಿದ್ದರೆ ಇಲಾಖೆ ನಿಯಮಾವಳಿ, ಆದೇಶ ಪ್ರತಿ ನೀಡುವಂತೆ ಸಾರ್ವಜನಿಕರನ್ನು ಪ್ರಶ್ನಿಸುತ್ತಾರೆ. ಮಾಹಿತಿ ಕೇಳಲು ಹೋದರೂ ಬಾರದಂತೆ ಸೂಚಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಯಲ್ಲಿ ಇವರ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲು ಠರಾವು ಮಾಡಲಾಗಿದೆ. ಈ ಬಗ್ಗೆ ಜಿಪಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಅಧಿಕಾರಿ ರಕ್ಷಣೆ ಮಾಡುತ್ತಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಹೀಗಾಗಿ ಆಟೋ, ಲಾರಿ ಹಾಗೂ ಖಾಸಗಿ ವಾಹನ ಮಾಲೀಕರೊಡನೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದೇವೆ. ಜು.22ರಿಂದ ಕೊಪ್ಪಳ ಆರ್ಟಿಒ ಕಚೇರಿ ಮುಂಭಾಗದಲ್ಲಿ ಅಧಿಕಾರಿ ವರ್ಗಾವಣೆ ಆಗುವವರೆಗೆ ಸತ್ಯಾಗ್ರಹ ನಡೆಸುತ್ತೇವೆ. ಎಲ್ಲ ವಾಹನ ಮಾಲೀಕರ ಸಂಟನೆಗಳು ಬೆಂಬಲಿಸಿವೆ ಎಂದು ತಿಳಿಸಿದರು. ಸಂಚಾಲಕರಾದ ನಿಸಾರಹ್ಮದ್ ಅಡ್ಡೇವಾಲೆ, ವಸಂತ ಕುಮಾರ, ಸಿದ್ದು ಅಂಗಡಿ, ಶಿವಣ್ಣ ಈಳಿಗೇರ ಇತರರಿದ್ದರು.