

ಕೊಪ್ಪಳ: ಮಾಜಿ ಸಂಸದ ಸಂಗಣ್ಣ ಕರಡಿ ಕನಸಿನಂತೆ ಕೊಪ್ಪಳದಲ್ಲಿ ಏರ್ ಪೋರ್ಟ್ ನಿಮಾರ್ಣಕ್ಕೆ ಶ್ರಮಿಸುವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಭರವಸೆ ನೀಡಿದರು.
ನಗರದ ಕುಷ್ಟಗಿ ರಸ್ತೆಗೆ "ಕಿತ್ತೂರು ರಾಣಿ ಚನ್ನಮ್ಮ' ಹೆಸರು ನಾಮಕರಣ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಸಂಗಣ್ಣ ಕರಡಿ ಅಧಿಕಾರವಧಿಯಲ್ಲಿ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ. ಅವರ ಸಲಹೆ ಜತೆಗೆ ಇತರ ಪಕ್ಷದ ನಾಯಕರ ಸಹಕಾರದೊಂದಿಗೆ ಏರ್ ಪೋರ್ಟ್ ನಿಮಾರ್ಣಕ್ಕೆ ಕ್ರಮವಹಿಸುವೆ. ಕುಷ್ಟಗಿ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮ ಹೆಸರಿಟ್ಟಿರುವುದು ಖುಷಿ ತಂದಿದೆ. ಮೇಲ್ಸೇತುವೆಗೂ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಬೇಕಿದೆ. ಶೀಘ್ರದಲ್ಲೇ ಕೇಂದ್ರ ಸಚಿವ ಸೋಮಣ್ಣ, ಸಚಿವ ಎಂ.ಬಿ.ಪಾಟೀಲ ಅವರನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದೆಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಗವಿಸಿದ್ದೇಶ್ವರ ಜಾತ್ರೆ ಹಾಗೂ ವಿವಿಧ ಕೆಲಸಗಳಿಗಾಗಿ ಕುಷ್ಟಗಿ ಮಾರ್ಗವಾಗಿ ಬರುವವರಿಗೆ ಅನುಕೂಲವಾಗಿದೆ. ಕೊಪ್ಪಳ ಹಾಗೂ ಭಾಗ್ಯನಗರದಲ್ಲಿ 24*7ಶುದ್ಧ ಕುಡಿವ ನೀರು ಪೂರೈಸಲು 145 ಕೋಟಿ ರೂ. ಮೊತ್ತದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಶ್ರೀವೇ 450 ಬೆಡ್ ಆಸ್ಪತ್ರೆ, ಕನಕದಾಸ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಇಟ್ಟುಕೊಳ್ಳಲಾಗುವುದೆಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರನ್ನು ಮೆಲಕು ಹಾಕುವ ದಿಸೆಯಲ್ಲಿ ನಗರಸಭೆ ರಸ್ತೆಗೆ ಅವರ ಹೆಸರಿಟ್ಟಿದೆ. ಶಾಸಕ, ಸಂಸದರು ಅಧಿಕಾರ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಮಾಡಲಿ. ನನ್ನ ಹೆಸರಿನ ನಾಮಫಲಕ ಹಾಕಿದ್ದಕ್ಕೆ ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ನಾನು ಬೇಡವೆಂದು ತಿಳಿಸಿದ್ದೆ. ನನ್ನ ಗಮನಕ್ಕೆ ತರದೇ ಅಳವಡಿಸಿದ್ದಾರೆ. ಜನರ ಆಶೀರ್ವಾದದಿಂದ 40 ವರ್ಷ ರಾಜಕಾರಣ ಮಾಡಿದ್ದೇನೆ. ನನ್ನ ಹೆಸರಿನಲ್ಲಿ ನಾಮಫಲಕ ಅಳವಡಿಸಲಿ ಎಂಬ ಅಪೇಕ್ಷೆ ಇಲ್ಲವೆಂದು ಸ್ಪಷ್ಟಪಡಿಸಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್, ಸದಸ್ಯರಾದ ರಾಜಶೇಖರ ಆಡೂರು, ಲತಾ ಚಿನ್ನೂರು, ಗುರುರಾಜ ಹಲಗೇರಿ, ಚನ್ನಪ್ಪ ಕೋಟ್ಯಾಳ, ಮುತ್ತುರಾಜ ಕುಷ್ಟಗಿ, ಅಜೀಮ್ ಅತ್ತಾರ್, ಸರ್ವೇಶಗೌಡ, ಪ್ರಮುಖರಾದ ಕೃಷ್ಣ ಇಟ್ಟಂಗಿ, ಕೃಷ್ಣಾರಡ್ಡಿ ಗಲಬಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಇತರರಿದ್ದರು.