ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮವಾಗಲಿ

Published on

ಕೊಪ್ಪಳ: ನ್ಯಾಯಾಲಯದಲ್ಲಿ ಆದೇಶವಾಗಿ ಜಮೀನು ಮಾಲೀಕರು ಯಾರೆಂದು ತೀರ್ಪು ಬಂದರೂ ಕಂದಾಯ ಅಧಿಕಾರಿಗಳ ತಪ್ಪಿನಿಂದ ಅನ್ಯಾಯವಾಗಿದೆ. ಇದೀಗ ಪೊಲೀಸರು ಅನಗತ್ಯ ಕಿರಿಕಿರಿ ನೀಡುತ್ತಿದ್ದಾರೆಂದು ಕಲ್ಯಾಣ ಕರ್ನಾಟಕ ರೈತ ಸಂದ ಅಧ್ಯಕ್ಷ ರಾಮಣ್ಣ ಜಾಡಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕುಷ್ಟಗಿ ತಾಲೂಕಿನ ವಿರುಪಾಪುರ ನಿವಾಸಿ ಶಂಕ್ರಮ್ಮ ದಾಯಿಪುಲ್ಲಿ ಎಂಬ ಮಹಿಳೆ ರಾಜಮ್ಮ ಎಂಬುವವರ ಜಮೀನು 2008ರಲ್ಲಿ ಖರೀದಿಸಿದ್ದಾರೆ. ತಾವರಗೇರಾ ಹೋಬಳಿ ಸಿದ್ದಾಪುರದ ಸರ್ವೇ ನಂಬರ್ 33 (ಬ)ನಲ್ಲಿ 9.33 ಎಕರೆ ಭೂಮಿ ಇದೆ. ರಾಜಮ್ಮ ಕುಟುಂಬ ಕರಡಿ ಆಡಿಸುವ ಕೆಲಸ ಮಾಡುತ್ತಿತ್ತು. ಹುಸೇನ ಸಾಬ್ ಎಂಬ ಅವರ ಸಮುದಾಯದ ವ್ಯಕ್ತಿ ಸಾಗುವಳಿ ಮಾಡಿಕೊಂಡಿದ್ದ. ರಾಜಮ್ಮಗೆ ಮೋಸ ಮಾಡಿ ಜಮೀನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಇದನ್ನು ಪ್ರಶ್ನಿಸಿದ ರಾಜಮ್ಮ ಉಪವಿಭಾಗಾಧಿಕಾರ ನ್ಯಾಯಾಲಯಕ್ಕೆ ಹಾಗೂ ಯಲಬುರ್ಗಾ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಹಾಕಿ ತನ್ನ ಹೆಸರಿಗೆ ಡಿಕ್ರಿ ಮಾಡಿಸಿಕೊಂಡು ಶಂಕ್ರಮ್ಮಗೆ ಮಾರಾಟ ಮಾಡಿದ್ದಾರೆ ಎಂದರು.

ಆ ಬಳಿಕ ಶಂಕ್ರಮ್ಮ 2011ರಲ್ಲೂ ಜಿಲ್ಲಾ ಕೋರ್ಟ್ನಲ್ಲಿ ಶಂಕ್ರಮ್ಮ ಹೆಸರಿನಲ್ಲಿ ಡಿಕ್ರಿ ಆಗಿದೆ. ಇದನ್ನು ಮರೆ ಮಾಚಿ ಶಂಕ್ರಮ್ಮಗೆ ನೋಟಿಸ್ ನಿಡದೇ, ಪ್ರತಿವಾದಿ ಮಾಡದೆ ಹುಸೇನ್ ಸಾಬ್ 2014ರಲ್ಲಿ ಎಸಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಉಲ್ಲಂಘಿಸಿದ ಅಂದಿನ ಎಸಿ ಮಂಜುನಾಥ, ತಹಸೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗಳು ಹುಸೇನ್ಸಾಬ್ ಹೆಸರಿಗೆ ಪಹಣಿ ಮಾಡಿಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ಹೀಗಿದ್ದರೂ ಪಾಮಮ್ಮ ಎಂಬುವವರಿಗೆ ಮಾರಾಟವಾಗಿದೆ. ಈ ಬಗ್ಗೆ ಮಾಹಿತಿ ಇರುವ ಪೊಲೀಸರು ಕಬ್ಜ ಬಿಡುವಂತೆ ಶಂಕ್ರಮ್ಮ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ.

ತಾವರಗೇರಾ ಠಾಣೆಯಿಂದ ನಿರಂತರ ಕರೆ ಮಾಡಿ ಸಹಿ ಮಾಡಿಕೊಡುವಂತೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಎಸ್ಪಿಗೆ ಮನವಿ ನೀಡಲಿದ್ದು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಜಮೀನು ವಾರಸುದಾರಳಾದ ಶಂಕ್ರಮ್ಮ, ರೈತ ಮುಖಂಡರಾದ ಮರಿಯಪ್ಪ ಸಾಲೋಣಿ, ಭೀಮಣ್ಣ ಪೊನ್ನಾಪುರ, ಸಣ್ಣ ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net