ಕೊಪ್ಪಳ: ಜಿಲ್ಲೆಯಲ್ಲಿ ತೊಗರಿ ಬೆಳೆ ಹೂ ಬಿಡುವ ಹಂತದಲ್ಲಿದ್ದು, ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
ಬಸಿಗಾಲುವೆ ಮಾಡಿ ತೇವಾಂಶ ಇಂಗಿಸಿ. ಕಸಮುಕ್ತಗೊಳಿಸಿ. ರಾಯಚೂರು ಕೃಷಿ ವಿವಿ ಅಭಿವೃದ್ಧಿಪಡಿಸಿದ ಪಲ್ಸ್ ಮ್ಯಾಜಿಕ್ ಲಘು ಪೋಷಕಾಂಶಗಳ ಮಿಶ್ರಣ 10 ಗ್ರಾಂ, ಜೊತೆಗಿರುವ ದ್ರಾವಕ 0.50 ಮಿ.ಲೀ.ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. 15 ದಿನಗಳ ಬಳಿಕ ಮತ್ತೊಮ್ಮೆ ಸಿಂಪಡಿಸಿ. ಬದಲಾಗಿ 19:19:19 ಹೆಸರಿನ ನೀರಿನಲ್ಲಿ ಕರಗುವ ಗೊಬ್ಬರವನ್ನು ಎಕರೆಗೆ 2 ಕಿ.ಗ್ರಾಂ.ನಂತೆ ಎರಡು ಬಾರಿ ಸಿಂಪಡಿಸಿ. ಕೀಟಕಗಳ ನಿಯಂತ್ರಣಕ್ಕೆ ಫ್ರೋಫಿನೋಫಾಸ 2 ಮಿ.ಲೀ. ಅಥವಾ ಇಮಾಮೆಕ್ಟಿನ್ ಬೆಂಜೋಯೆಟ್ 0.40 ಗ್ರಾಂ. ಅಥವಾ ಥಯೋಡಿಕಾರ್ಬ 0.6 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸೆ ಮಾಡಿ.
ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಾಫ್ (ಕಾರ್ಬನ್ ಡೈಜಿಂ + ಮ್ಯಾಂಕೊಜೆಬ್) ಪುಡಿ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಸೊರಗುರೋಗ ಅಥವಾ ನೆಟೆ ರೋಗಕ್ಕೆ ಕಾರ್ಬನ್ ಡೈಜಿಂ 50% ಡಬ್ಲೂಪಿ ಶಿಲೀಂಧ್ರನಾಶಕ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಕೊಳೆರೋಗ ಅಥವಾ ಕಾಂಡದ ಮೇಲೆ ಮಚ್ಚೆ ರೋಗಕ್ಕೆ ಮೆಟಾಲಾಕ್ಸಿಲ್ 35 ಡಬ್ಲೂಎಸ್ ಶಿಲೀಂಧ್ರನಾಶಕ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಿ. ನೈಸರ್ಗಿಕ ಕೃಷಿಯಲ್ಲಿ ಬಳಸಲ್ಪಡುವ ಜೀವಾಮೃತ ಬಳಕೆ ಸೂಕ್ತ. ಎರಡು ಕೀಟನಾಶಕಗಳ ನಡುವೆ ಒಂದು ಬಾರಿ ಬೇವಿನ ಎಣ್ಣೆ ಬಳಸಿದರೆ ಪರಿಣಾಮಕಾರಿ ಫಲಿತಾಂಶ ಕಾಣಬಹುದು ಎಂದು ಮಾಹಿತಿ ನೀಡಿದ್ದಾರೆ.