ನಿಯಮಾನುಸಾರ ಕಾಮಗಾರಿ ಅನುಷ್ಠಾನಗೊಳಿಸಲು ಮಾಲಪಾಟಿ ಸೂಚನೆ

RDPR commissinor meting with officers koppal
ಕೊಪ್ಪಳದಲ್ಲಿ ಶನಿವಾರ ನರೇಗಾ ಆಯುಕ್ತ ಪವನಕುಮಾರ್​ ಮಾಲಪಾಟಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ್​ ದಿಡ್ಡಿಮನಿ ಇದ್ದರು.
Published on

ಕೊಪ್ಪಳ: ನರೇಗಾ ಯೋಜನೆಯ ಮಾರ್ಗಸೂಚಿ ಅನುಸಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತ ಪವನಕುಮಾರ್​ ಮಾಲಪಾಟಿ ಸೂಚಿಸಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಶನಿವಾರ ನರೇಗಾ ಅನುಷ್ಠಾನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಮಾರ್ಗಸೂಚಿ ಅನುಸಾರ ಕಾಮಗಾರಿ ವಿಳಂಬ ಮಾಡದೆ ಅನುಷ್ಠಾನ ಮಾಡಿ. ತಾಲೂಕುವಾರು ಪ್ರತ್ಯೇಕ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ. ಕಾಮಗಾರಿ ಗುಣಮಟ್ಟದಿಂದ ಇರಲಿ. ಕಡತಗಳನ್ನು ಸರಿಯಾಗಿ ನಿರ್ವಹಿಸಿ. ಕಾಮಗಾರಿ ಸ್ಥಳದಲ್ಲಿ ಮಾಹಿತಿ ಫಲಕ ಕಡ್ಡಾಯವಾಗಿ ಅಳವಡಿಸಿ. ನರೇಗಾ ಯೋಜನೆಯ ಏಕೀಕೃತ ಸಹಾಯವಾಣಿ 8277506000 ಗೆ ದೂರು ಅಥವಾ ಕೆಲಸದ ಬೇಡಿಕೆಗಾಗಿ ಕರೆ ಮಾಡಬಹುದಾಗಿದೆ. ಈ ಬಗ್ಗೆ ಗ್ರಾಪಂ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಿ.

ಕಡತಗಳಲ್ಲಿ 21 ಅಂಶಗಳನ್ನು ಒಳಗೊಂಡ ದಾಖಲೆ ಇರಬೇಕು. ನಿತ್ಯ 7 ವಹಿ ಕಡ್ಡಾಯವಾಗಿ ನಿರ್ವಹಿಸಿ. ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ. ಕಡಿಮೆ ಮಾನವ ದಿನಗಳನ್ನು ಸೃಜಿಸಿದ ಗ್ರಾಪಂಗಳು ಮಾಸಿಕ ಪ್ರಗತಿ ಸಾಧನೆ ಗುರಿಹಾಕಿಕೊಳ್ಳಿ. ಯಾವುದೇ ಕಾರಣಕ್ಕೂ ಕೂಲಿಕಾರರಿಗೆ ಕೆಲಸ ನಿರಾಕರಿಸುವಂತಿಲ್ಲ. ಈ ಬಗ್ಗೆ ದೂರು ಬರದಂತೆ ಎಚ್ಚರವಹಿಸಲು ತಾಕೀತು ಮಾಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ್​ ದಿಡ್ಡಿಮನಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್​ ತೊದಲಬಾಗಿ, ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ್​, ಸಹಾಯಕ ನಿರ್ದೇಶಕ ತ್ಯಾಗರಾಜ್​, ತಾಂತ್ರಿಕ ಇಂಜಿನಿಯರ್​ ಯಶವಂತ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net