ಅತ್ಯಾಚಾರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

Published on

ಕೊಪ್ಪಳ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಮಾಟಲದಿನ್ನಿಯ ಶಫಿಕ ಭೀರಸಾಬ ಮೇಲ್ಗಡೆ ಎಂಬ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ನಗರದ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶಿಸಿದೆ.

ಕುಕನೂರ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಕುಟುಂಬದೊಂದಿಗೆ ಕೂಲಿ ಕೆಲಸಕ್ಕೆ ಬಾಲಕಿ ಬಂದಿದ್ದಳು. ಶಫಿಕ ಪ್ರೀತಿಸುವುದಾಗಿ ಅಪ್ರಾಪ್ತಳನ್ನು ಪುಸಲಾಯಿಸಿ, ವಾಸಕ್ಕೆಂದು ನೀಡಿದ್ದ ಶೆಡ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಸಮಯ ಸಿಕ್ಕಾಗಲೆಲ್ಲ ಅತ್ಯಾಚಾರ ಮಾಡಿದ್ದಾನೆ. ನಿರ್ಮಾಣ ಕೆಲಸ ಮುಗಿದ ನಂತರ ಬಾಧಿತಳು ತಮ್ಮ ಗ್ರಾಮಕ್ಕೆ ಹೋಗುವ ವಿಷಯ ತಿಳಿದು 2019ರ ಜೂನ್​ 2ರಂದು ಕುಕನೂರು ಬಸ್​ ನಿಲ್ದಾಣದಿಂದ ಬಾಲಕಿಯನ್ನು ಅಪಹರಿಸಿದ್ದ.

ಮಹಾರಾಷ್ಟ್ರದ ಸತಾರ ನಗರಕ್ಕೆ ಕರೆದೊಯ್ದು 20 ದಿನಗಳವರೆಗೆ ಅಲ್ಲೇ ತಂಗಿದ್ದ. ಅಲ್ಲಿಯೂ ಬಾಲಕಿ ಮೇಲೆ ಆಗಾಗ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಲಬುರ್ಗಾ ಗ್ರಾಮೀಣ ವೃತ್ತ ಸಿಪಿಐ ರಮೇಶ ರೊಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಶಫಿಕನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ಭರಿಸಲು ಸೂಚಿಸಿದೆ.

ದಂಡದ ಮೊತ್ತದಲ್ಲಿ 10 ಸಾವಿರ ರೂ.ಗಳನ್ನು ಬಾಧಿತಳಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಜೂ.24ರಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net