

ಕೊಪ್ಪಳ:ನಗರ ಸೇರಿ ತಾಲೂಕಿನ ವಿವಿಧೆಡೆ ಸೋಮವಾರ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಈದ್ಗಾ ಮೈದಾನ, ಹುಲಿಕೆರೆ ಮೈದಾನ ಹಾಗೂ ವಿವಿಧ ಪ್ರಾರ್ಥನಾ ಸ್ಥಳಗಳು ಮತ್ತು ತಾಲೂಕಿನ ಭಾಗ್ಯನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಬೆಳಗ್ಗೆಯೇ ಸಾಮೂಹಿಕ ಪ್ರಾರ್ಥನೆಗಳು ನೆರವೇರಿದವು. ಬಿಸಿಲಿನ ತಾಪ ಹೆಚ್ಚಿರುವ ಕಾರಣ ಕೆಲವರು ಪ್ರಾರ್ಥನೆ ವೇಳೆ ಕೊಡೆ ಹಿಡಿದು ಕುಳಿತಿದ್ದು ಕಂಡುಬಂತು. ಮಕ್ಕಳು ಸೇರಿ ಎಲ್ಲ ವಯೋಮಾನದ ಪುರುಷರು ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನ ಭರ್ತಿಯಾದ ಕಾರಣ ಕೆಲವರು ರಸ್ತೆಯಲ್ಲಿ ಕುಳಿತು ದೇವರಿಗೆ ನಮಿಸಿದ್ದು ಕಂಡುಬಂತು.
ನಗರಾಡಳಿತದಿಂದ ಪ್ರಾರ್ಥನೆ ಸಲ್ಲಿಕೆಗೆ ಶುಚಿಯಾಗಲು ನೀರು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಪ್ರಾರ್ಥನೆ ಮುಗಿದ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ರಸ್ತೆಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಶೋಕ ವೃತ್ತದಿಂದ ಡಿಎಆರ್ ಪೊಲೀಸ್ ಬಳಿ ವೃತ್ತದವರೆಗೆ ಒನ್ ವೇ ಮಾಡಿಕೊಡಲಾಯಿತು. ಹಬ್ಬ ಹಿನ್ನೆಲೆ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.
ಮುಸ್ಲಿಮ್ ಸಮುದಾಯದ ನಾಯಕರು ಪ್ರಾರ್ಥನೆಗೆ ಆಗಮಿಸಿದ ಗಣ್ಯರನ್ನು ಸನ್ಮಾನಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಎಂ.ಕಾಟನ್ ಪಾಷಾ, ಪ್ರಮುಖರಾದ ಸಿ.ವಿ.ಚಂದ್ರಶೇಖರ, ಡಾ.ಮಹೇಶ ಗೋವನಕೊಪ್ಪ, ಅಕ್ಬರ್ ಪಾಷಾ ಪಲ್ಟನ್, ಶಿವಣ್ಣ ಭೂಮಕ್ಕನವರ ಇತರರು ಇದ್ದರು.