ಕೊಪ್ಪಳ ಜಿಲ್ಲಾದ್ಯಂತ ರಾಮೋತ್ಸವ ಸಂಭ್ರಮ

IMG_20240122_121309
Published on
  • * ಮುಸ್ಲಿಮರಿಂದ ರಾಮನ ಪೂಜೆ, ಪ್ರಸಾದ ವಿತರಣೆ
    * ಕೆಆರ್ ಪಿಪಿ ಮುಖಂಡರಿಂದ ಸಾಮೂಹಿಕ ಪೂಜೆ

ಕೊಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಂಭ್ರಮ ಮನೆ ಮಾಡಿದೆ. ವಿವಿಧೆಡೆ ವಿಶೇಷ ಪೂಜೆ, ಪ್ರಸಾದ ವಿತರಣೆ ಮಾಡಲಾಗುತ್ತಿದೆ.

ಕೊಪ್ಪಳದ‌ ರಾಮ ಮಂದಿರ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಸಂಘಟನೆಯಿಂದ ಬ್ರಾಹ್ಮಣ ಸದಾಚಾರ ಭವನದಲ್ಲಿ ಕೋಟಿ ಮಹಾಯಜ್ಞ ಸಮರ್ಪಣಾ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಭಾಗ್ಯನಗರ ಪಟ್ಟಣದ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಿಸಲಾಯಿತು. ಭಜರಂಗಿ ಬಂಟರ ಬಳಗದೊಂದಿಗೆ ಯುವಕರು ಸಾಮೂಹಿಕ ರಕ್ತದಾನ ಶಿಬಿರ ಏರ್ಪಡಿಸಿ ಶ್ರೀರಾಮನ ಹೆಸರಿನಲ್ಲಿ ರಕ್ತದಾನ ಮಾಡಿದರು.

ಸೌಹಾರ್ದತೆ ಮೆರೆದ ಮುಸ್ಲಿಮರು: ಅಯೋದ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮನಿಗೆ ಪೂಜೆ ಸಲ್ಲಿಸುವ ಮೂಲಕ ಮುಸ್ಲಿಮ್ ಬಂಧವರು ಸೌಹಾರ್ದತೆ ಮೆರೆದರು. ಭಾಗ್ಯನಗರದ ಶ್ರೀರಾಮಮಂದಿರ, ಆಂಜನೇಯ ದೇವಾಯಲಯದಲ್ಲಿ ಭಾಗ್ಯನಗರ ಮುಸ್ಲಿಮ್ ಪಂಚ್ ಕಮಿಟಿಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಕೆಆರ್ ಪಿಪಿ ಪದಾಧಿಕಾರಿಗಳಿಂದ ಸಾಮೂಹಿಕ ಪೂಜೆ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿತ ಕೆಆರ್ ಪಿಪಿ ಪಕ್ಷದ ಮುಖಂಡರು ಕೊಪ್ಪಳದ ಕಾವ್ಯಾನಂದ ಪಾರ್ಕ್ ನಲ್ಲಿನ ಈಶ್ವರ ದೇವರಿಗೆ ಸಾಮೂಹಿಕ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ನೇತೃತ್ವದಲ್ಲಿ ಪೂಜೆ ಜರುಗಿಸಲಾಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು. ಕೆಆರ್ಪಿಪಿ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ, ಯುವ ಮುಖಂಡ ಮಹಾಂತೇಶ ಸಂಗಟಿ ಸೇರಿ ಪಕ್ಷದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net