ಜಿಲ್ಲಾದ್ಯಂತ ಮಳೆರಾಯನ ಆರ್ಭಟ, ತುಂಬಿದ ಹಳ್ಳ-ಕೊಳ್ಳಗಳು

raining in koppal munirabada
Published on

ಕೊಪ್ಪಳ: ನಗರ ಸೇರಿ ತಾಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಶುಕ್ರವಾರವೂ ಮುಂದುವರೆದಿದ್ದು, ಹಳ್ಳ-ಕೊಳ್ಳಗಳು ತುಂಬ ಹರಿದಿವೆ.

ಮುಂಗಾರು ಚುರುಕು ಪಡೆದಿದ್ದು, ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ಗುರುವಾರ ರಾತ್ರಿಯಿಡಿ ಮಳೆಯಾಗಿದ್ದು ರೈತಾಪಿ ವರ್ಗದಲ್ಲಿ ಹರ್ಷ ತಂದಿದೆ. ಈಗಾಗಲೇ ಮುಂಗಾರು ಬಿತ್ತನೆ ಆರಂಭವಾಗಿದೆ. ಸಕಾಲಕ್ಕೆ ಮಳೆಯಾಗುತ್ತಿದ್ದು, ರೈತರು ಖುಷಿಯಲ್ಲಿದ್ದಾರೆ. ಜಡಿ ಮಳೆ ಜತೆಗೆ ಆಗಾಗ ವರುಣ ಆರ್ಭಟಿಸುತ್ತಿದ್ದು, ಜಮೀನಿನಲ್ಲಿ ತೇವಾಂಶ ಪ್ರಮಾಣ ಹೆಚ್ಚಳವಾಗಿದೆ. ತಾಲೂಕಿನ ಗ್ರಾಮೀಣ ಭಾಗದ ಹಳ್ಳ, ಕೊಳ್ಳಗಳು, ಚೆಕ್​ಡ್ಯಾಂಗಳು ಭರ್ತಿಯಾಗಿದ್ದು, ನೀರು ತುಂಬಿ ಹರಿಯುತ್ತಿವೆ. ಅಂತರ್ಜಲಮಟ್ಟವೂ ಸುಧಾರಣೆ ಆಗುತ್ತಿದೆ. ಕಳೆದ ಬೇಸಿಗೆಯಲ್ಲಿ ಕೊಳವೆ ಬಾವಿಗಳಲ್ಲಿ ಕುಸಿದಿದ್ದ ನೀರಿನ ಪ್ರಮಾಣ ಮತ್ತೆ ಚೇತರಿಕೆ ಕಂಡಿದೆ. ಶುಕ್ರವಾರವೂ ಮಳೆ ಮುಂದುವರೆದಿದ್ದು, ತಾತ್ಕಾಲಿಕವಾಗಿ ಬಿತ್ತನೆ ಕಾರ್ಯಕ್ಕೆ ಬ್ರೇಕ್​ ಬೀಳುವಂತಾಗಿದೆ.

ಮುನಿರಾಬಾದ್​ ಭಾಗದಲ್ಲಿ ವಿಜಯನಗರ ಕಾಲುವೆ ವ್ಯಾಪ್ತಿಯ ರೈತರ ಭತ್ತ ಕಟಾವು ನಡೆದಿದೆ. ರಸ್ತೆ ಸೇರಿ ಇತರೆಡೆ ಭತ್ತದ ರಾಶಿ ಹಾಕಿದ್ದು, ಮಳೆಯಿಂದಾಗಿ ಒಣಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಜಮೀನಿನಲ್ಲಿ ರಾಶಿ ಮಾಡಿದರೆ ಮಳೆಯಿಂದ ಮೊಳಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಹಿಟ್ನಾಳ ಟೋಲ್​ ಗೇಟ್​ ಸೇರಿ ರಸ್ತೆ ಪಕ್ಕದಲ್ಲಿ ರೈಯರು ರಾಶಿ ಮಾಡುತ್ತಿದ್ದಾರೆ. ವರುಣ ದೇವ ಕಣ್ಣಾಮುಚ್ಚಾಲೆ ಆಡುತ್ತಿದ್ದು, ರಾಶಿ ರಕ್ಷಣೆಗೆ ಟಾರ್ಪಲಿನ್​ ಹಿಡಿದು ದಿವವಿಡೀ ರಾಶಿ ಕಾಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net