

ವಿಜಯವಾಣಿ ವಿಶೇಷ ಕೊಪ್ಪಳ
ಮುಂಗಾರು ಆರಂಭದಲ್ಲಿ ಆರ್ಭಟಿಸಿದ ವರುಣ ತಣ್ಣಗಾಗಿದ್ದಾನೆ. ಈವರೆಗೆ ಶೇ.57ರಷ್ಟು ಬಿತ್ತನೆಯಾಗಿದ್ದು, ಬಿತ್ತಿದ ಬೆಳೆಗೂ ನೀರಿನ ಅವಶ್ಯಕತೆ ಇದೆ. ಸದ್ಯ ಮಳೆ ಆಗದಿದ್ದಲ್ಲಿ ಬಿತ್ತಿದ ಬೆಳೆಗೂ ಒಣಗುವ ಭೀತಿ ಶುರುವಾಗಿದ್ದು, ಅನ್ನದಾತರು ಆಕಾಶದತ್ತ ಮುಖ ಮಾಡಿ ಕೃಪೆ ತೋರು ವರುಣ ದೇವ ಎಂದು ಬೇಡಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಭೀಕರ ಬರಕ್ಕೆ ರೈತಾಪಿ ವರ್ಗ ಕಂಗಾಲಾಗಿದೆ. ಈ ವರ್ಷ ಪೂರ್ವ ಮುಂಗಾರು, ಮುಂಗಾರು ಆರಂಭದಲ್ಲಿ ಜಿಲ್ಲಾದ್ಯಂತ ಮಳೆ ಆಗಿದೆ. ಸಕಾಲಕ್ಕೆ ಮಳೆ ಆಗಮಿಸಿದ್ದರಿಂದ ರೈತರು ಹರ್ಷಗೊಂಡಿದ್ದಾರೆ. ನಿರೀೆಗೂ ಮೀರಿ ಬಿತ್ತನೆ ಗುರಿ ಹೊಂದಿದ್ದಾರೆ. ಪೂರಕವಾಗಿ ಜಿಲ್ಲಾಡಳಿತ, ಕೃಷಿ ಇಲಾಖೆ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿ ವಿತರಣೆ ಮಾಡುತ್ತಿದೆ. ಎರಿ ಭಾಗದಲ್ಲಿ ಅಧಿಕ ಬಿತ್ತನೆಯಾಗಿದೆ. ಮಳೆಯೂ ಉತ್ತಮವಾಗಿದ್ದರಿಂದ ಹೆಸರು ಬೆಳೆ ನಳನಳಿಸುವಂತಿದೆ. ಸದ್ಯ ಭೂಮಿ ತೇವಾಂಶ ಕಳೆದುಕೊಳ್ಳುತ್ತಿದ್ದು, ಮಳೆ ಆಗಮನದ ನೀರಿೆಯಲ್ಲಿ ಅನ್ನದಾತರಿದ್ದಾರೆ. ವಾತಾವರಣ ತಂಪಿದ್ದು, ಮೋಡಗಳು ಕಟ್ಟಿಕೊಳ್ಳುತ್ತಿವೆ. ಆದರೆ, ಗಾಳಿಯೂ ಬೀಸುತ್ತಿದ್ದು, ಮಳೆ ಬೀಳುತ್ತಿಲ್ಲ. ಇದರಿಂದ ಮತ್ತೆ ಆತಂಕದ ಛಾಯೆ ಆವರಿಸುವಂತಾಗಿದೆ.
ಜಿಲ್ಲಾದ್ಯಂತ ಮುಂಗಾರಿನಲ್ಲಿ 3,08,000 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 1,76,850 (ಶೇ.57) ಬಿತ್ತನೆ ಆಗಿದೆ. ಇನ್ನು ಶೇ.33ರಷ್ಟು ಬಿತ್ತನೆ ಆಗಬೇಕಿದೆ. ಕೊಪ್ಪಳ ತಾಲೂಕಿನಲ್ಲಿ 38,970 (ಶೇ.62) ಹೆಕ್ಟೇರ್, ಕುಷ್ಟಗಿ 55,580 (ಶೇ.70) ಹೆಕ್ಟೇರ್, ಯಲಬುರ್ಗಾ 38,755 (ಶೇ.701) ಹೆಕ್ಟೇರ್, ಕುಕನೂರು 21,065(ಶೇ.81) ಹೆಕ್ಟೇರ್, ಗಂಗಾವತಿ 2420 (ಶೇ.10) ಹೆಕ್ಟೇರ್, ಕಾರಟಗಿ 1090 (ಶೇ.04) ಹೆಕ್ಟೇರ್, ಕನಕಗಿರಿ 18,990 (ಶೇ.62) ಹೆಕ್ಟೇರ್ ಕ್ಷೇತ್ರ ಬಿತ್ತನೆ ಆಗಿದೆ. ಪ್ರಮುಖವಾಗಿ 83,315 ಹೆಕ್ಟೇರ್ ಮೆಕ್ಕೆಜೋಳ, 31,120 ಹೆಕ್ಟೇರ್ ಸಜ್ಜೆ, 1,767 ಹೆಕ್ಟೇರ್ ಜೋಳ, 25,530 ಹೆಕ್ಟೇರ್ ತೊಗರಿ, 18,480 ಹೆಕ್ಟೇರ್ ಹೆಸರು, 3,710 ಹೆಕ್ಟೇರ್ ಶೇಂಗಾ, 1,340 ಹೆಕ್ಟೇರ್ ಸೂರ್ಯಕಾಂತಿ, 4,560 ಹೆಕ್ಟೇರ್ ಎಳ್ಳು, 6,110 ಹೆಕ್ಟೇರ್ ಕ್ಷೇತ್ರದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ.
ಗಂಗಾವತಿ, ಕಾರಟಗಿ, ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿ, ಕನಕಗಿರಿ ತಾಲೂಕುನ ನವಲಿ ಭಾಗದಲ್ಲಿ ಪ್ರಮುಖವಾಗಿ ಭತ್ತ ನಾಟಿ ಆಗಲಿದೆ. ಜಿಲ್ಲಾದ್ಯಂತ 61,233 ಹೆಕ್ಟೇರ್ ನಾಟಿ ಗುರಿ ಇದೆ. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತಿದ್ದು ಕನಿಷ್ಠ 40&50 ಟಿಎಂಸಿ ಅಡಿ ಸಂಗ್ರಹ ಆಗುವವರೆಗೆ ಬೆಳೆಗಳಿಗೆ ನೀರು ಹರಿಸಲು ಬರುವುದಿಲ್ಲ. ಹೀಗಾಗಿ ಭತ್ತ ನಾಟಿ ಕಾರ್ಯ ವಿಳಂಬವಾಗಲಿದೆ. ಸದ್ಯ ರೈತರು ಸಸಿಮಡಿ ಹಾಕಿಕೊಳ್ಳುತ್ತಿದ್ದು, ಜಲಾಶಯ ಭರ್ತಿಯಾಗುವ ಭರವಸೆಯಲ್ಲಿದ್ದಾರೆ.
ಪೂರ್ವ ಮುಂಗಾರಿನಲ್ಲಿ ಎರಿ ಭಾಗದಲ್ಲಿ ಹೆಸರು, ತೊಗರಿ ಬಿತ್ತನೆ ಆಗಿದೆ. ಹೆಸರು ಬೆಳೆ ಉತ್ತಮವಾಗಿದ್ದು ನಳನಳಿಸುತ್ತಿದೆ. ತೇವಾಂಶ ಕಾಪಾಡಿಕೊಂಡಿದ್ದರೂ ಈ ವಾರದಲ್ಲಿ ಮಳೆ ಅವಶ್ಯವಿದೆ. ಉಳಿದಂತೆ ಮಸಾರಿ ಭಾಗದಲ್ಲಿ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ಸೇರಿ ಇತರ ಭಾಗಗಳಲ್ಲಿ ಮಳೆ ಆಗಲೇಬೇಕಿದೆ. ಕಳೆದೊದ 10 ದಿನಗಳ ಹಿಂದೆ ವಿಪರೀತ ಮಳೆಯಾಗಿದ್ದು, ಬಿತ್ತನೆಯೂ ತಡವಾಗಿದೆ. ಸದ್ಯ ಬಿತ್ತನೆ ಆಗಿದ್ದು, ಬೆಳೆಗಳು ಗೇಣುದ್ದ ಬೆಳೆದು ನಿಂತಿವೆ. ರಸಗೊಬ್ಬರ ನೀಡುವ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ. ಈ ಹಂತದಲ್ಲಿ ಮಳೆ ಅವಶ್ಯವಿದೆ. ಆದರೆ, ಹವಾಮಾನ ಇಲಾಖೆ ವರದಿ ಅನ್ವಯ ಜೂನ್ ಕೊನೇ ವಾರದಲ್ಲಿ ಕೊಪ್ಪಳದಲ್ಲಿ ಮಳೆ ಕೊರತೆ ಆಗಲಿದೆ ಎಂಬ ಮಾಹಿತಿ ಇದೆ.
ಮಧ್ಯದಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ವರದಿ ನೀಡಿದೆ. ಆದರೆ, ಸಾಧಾರಣ ಮಳೆಯೂ ಬೀಳುತ್ತಿಲ್ಲ. ಅಲ್ಲಲ್ಲಿ ತುಂತುರು ಮಳೆ ಆಗಿದ್ದು ಬಿಟ್ಟರೆ ಬೆಳೆಗಳಿಗೆ ಬೇಕಾಗುವಷ್ಟು ತೆವಾಂಶ ಕಂಡು ಬರುತ್ತಿಲ್ಲ. ಕಳೆದ ವರ್ಷ ಬರದಿಂದ ಮುಂಗಾರು&ಹಿಂಗಾರು ಬೆಳೆ ನಾಶವಾಗಿ ಅನ್ನದಾತರು ಕಷ್ಟದಲ್ಲಿ ಕೈ ತೊಳೆದಿದ್ದಾರೆ.
ಸದ್ಯ ಸಾಲ ಮಾಡಿಕೊಂಡು ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಮುಂದಿನ ವಾರದಲ್ಲಿ ಮಳೆ ಕೊರತೆ ಉಂಟಾದಲ್ಲಿ ಈಗಿರುವ ನಿಂತ ಬೆಳೆಯನ್ನೂ ಉಳಿಸಿಕೊಳ್ಳುವುದು ಕಷ್ಟವಿದೆ. ವರುಣ ದೇವ ಕೃಪೆ ತೋರಲಿ ಎಂದು ರೈತರು ಬಿತ್ತನೆ ಹಾಗೂ ಕೃಷಿ ಚಟುವಟಿಕೆ ಮುಂದುವರೆಸಿದ್ದಾರೆ.
ಮಳೆ ಕೊರತೆ ಮುಂದುವರಿಕೆ
ಈ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಕಳೆದ ವಾರದವರೆಗೆ ವಾಡಿಗೆಗಿಂತ ಅಧಿಕ ಮಳೆ ಆಗಿರುವುದು ಸಂತಸ ತಂದಿದೆ. ಕಳೆದ ಮಾರ್ಚ್ನಿಂದ ಮೇ ಅಂತ್ಯಕ್ಕೆ ವಾಡಿಕೆ ಮಳೆ 79 ಮಿ.ಮೀ. ಪೈಕಿ 119 ಮಿ.ಮೀ. ಆಗಿದೆ. ಶೇ.51ರಷ್ಟು ಹೆಚ್ಚಾಗಿದೆ. ಇನ್ನು ಮೇ ತಿಂಗಳಲ್ಲಿ 51 ಮಿ.ಮೀ. ವಾಡಿಕೆ ಮಳೆಯಲ್ಲಿ 103 ಮಿ.ಮೀ.(ಶೇ.100) ಅಧಿಕವಾಗಿದೆ. ಜೂನ್ನಲ್ಲಿ ಈವರೆಗೆ 79 ಮಿ.ಮೀ. ವಾಡಿಕೆ ಮಳೆಯಲ್ಲಿ 119 ಮಿ.ಮೀ. (ಶೇ.51) ಹೆಚ್ಚಾಗಿದೆ. ಆದರೆ ಕಳೆದೊಂದು ವಾರದಲ್ಲಿ 13 ಮಿ.ಮೀ. ವಾಡಿಕೆ ಮಳೆ ಪೈಕಿ 7 ಮಿ.ಮೀ. (ಶೇ.&47ರಷ್ಟು) ಮಳೆ ಕೊರತೆ ಆಗಿದೆ. ಒಟ್ಟಾರೆ ಮಳೆ ಪ್ರಮಾಣ ಅಧಿಕವಾಗಿದ್ದರೂ ಏಕಕಾಲಕ್ಕೆ ಸುರಿದಿದೆ. ಆದರೆ, ಸದ್ಯ ನಿಂತಿರುವ ಬೆಳೆಗೆ ಮಳೆ ಕೊರತೆ ಆಗಿದೆ. ಎಡಿ ಕುಂಟಿ ಹೊಡೆಯುತ್ತಿದ್ದು, ಗೊಬ್ಬರ ನೀಡಲಾಗುತ್ತಿದೆ. ಈ ಹಂತದಲ್ಲಿ ಮಳೆ ಆದಲ್ಲಿ ಅನುಕೂಲವಾಗಲಿದೆ.
ಈ ವರ್ಷ ಮುಂಗಾರಿನಲ್ಲಿ ಉತ್ತಮ ಮಳೆ ಆಗಿದೆ. ಆದರೆ, ಶೇ.57ರಷ್ಟು ಬಿತ್ತನೆ ಆಗಿದೆ. ಸದ್ಯ ನಿಂತಿರುವ ಬೆಳೆಗೆ ಮಳೆ ಅವಶ್ಯಕತೆ ಅಧಿಕವಿದೆ. ಈ ವಾರದಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ವರದಿ ಇದೆ. ಬರುವ ನಿರೀೆ ಇದೆ. ಬಂದಲ್ಲಿ ಸಾಕಷ್ಟು ಅನುಕೂಲವಾಗಲಿದೆ. -ರುದ್ರೇಶಪ್ಪ ಟಿ.ಎಸ್. ಜಂಟಿ ಕೃಷಿ ನಿರ್ದೇಶಕ ಕೊಪ್ಪಳ.
-ರುದ್ರೇಶಪ್ಪ ಟಿ.ಎಸ್. ಜಂಟಿ ಕೃಷಿ ನಿರ್ದೇಶಕ ಕೊಪ್ಪಳ.
ಈ ವರ್ಷ ಉತ್ತಮ ಮಳೆ ಆಗಿದೆ. ನಾವೂ ಬಿತ್ತನೆ ಮಾಡಿದ್ದೇವೆ. ಬೆಳೆಗಳು ಗೇಣುದ್ದ ಬೆಳೆದಿವೆ. ತಕ್ಷಣ ಒಂದು ಮಳೆ ಆಗಲೇಬೇಕಿದೆ. ಇಲ್ಲದಿದ್ದಲ್ಲಿ ಬೆಳೆ ಒಣಗುವ ಭೀತಿ ಶುರುವಾಗಿದೆ. ಆದರೂ ಸಾಲ ಮಾಡಿಕೊಂಡು ಮಳೆರಾಯನನ್ನು ನಂಬಿ ಬಿತ್ತನೆ ಮಾಡುತ್ತಿದ್ದೇವೆ. ದೇವರು ಕೃಪೆ ತೋರಿಸಬೇಕು. -ಸುರೇಶಪ್ಪ ಕರಮುಡಿ. ರೈತ ಕೊಪ್ಪಳ.
-ಸುರೇಶಪ್ಪ ಕರಮುಡಿ. ರೈತ ಕೊಪ್ಪಳ.