ಕೊಪ್ಪಳ: ನಗರದ ರೈಲು ನಿಲ್ದಾಣ ನವೀಕರಣ ನಡೆದಿದ್ದು, ಅದಕ್ಕೆ ಗಂಡುಗಲಿ ಕುಮಾರ ರಾಮ ಎಂದು ಮರು ಹೆಸರಿಸಬೇಕೆಂದು ಪ್ರಗತಿಪರ ಸಂಟನೆಗಳ ಒಕ್ಕೂಟ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಒತ್ತಾಯಿಸಿದರು.
ಈಗಾಗಲೇ ಈ ಬಗ್ಗೆ ಸಂಸದ, ಸಚಿವರಿಗೆ ಮನವಿ ಸಲ್ಲಿಕೆ ಮಾಡಿದ್ದೇವೆ. ನಾವು ನಡೆಸಿದ ಸಭೆಯಲ್ಲಿ ಸಾಮ್ರಾಟ ಅಶೋಕ ಹಾಗೂ ಕಮ್ಮಟ ದುರ್ಗದ ಗಂಡುಗಲಿ ಕುಮಾರ ರಾಮ ಹೆಸರು ಪ್ರಸ್ತಾಪ ಆದವು. ಸಾಮ್ರಾಟ ಅಶೋಕ ವಿಶ್ವಮಾನ್ಯವಾಗಿದ್ದಾನೆ. ಹೀಗಾಗಿ ಎಲ್ಲಾದರೂ ಆತನ ಹೆಸರಿಡಲು ಅವಕಾಶವಿದೆ. ಆದರೆ, ನಮ್ಮ ಜಬ್ಬಲಗುಡ್ಡದ ಕುಮಾರ ರಾಮ ಇತಿಹಾಸದಲ್ಲಿ ದಾಖಲಾಗಿದ್ದಾನೆ. ಕುಮಾರ ರಾಮ ಮನೆ ಮನೆಯಲ್ಲಿ ಜನಜನಿತವಾಗಿದೆ. ಗ್ರಾಮೀಣ ಭಾಗದ ಪ್ರತಿ ತಾಯಿ ತನ್ನ ಮಗನಿಗೆ ಕೊಮರಾಮ ಎಂದು ಸಂಬೋಧಿಸುತ್ತಾಳೆ. ಆ ಕೊಮರಾಮನೇ ಕುಮಾರ ರಾಮ. ಆದರೆ, ಈ ಬಗ್ಗೆ ನಮಗೆ ಅರಿವಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ಭಾಗದ ಗ್ರಾಮೀಣ ಜನಪದ ಕಥೆಗಳಲ್ಲೂ ಕುಮಾರರಾಮನ ಉಲ್ಲೇಖಗಳಿವೆ. ಪರನಾರಿ ಸಹೋದರನೆಂದು ಖ್ಯಾತನಾಗಿದ್ದ. ರಾಜಾಡಳಿತದ ಇತಿಹಾಸದಲ್ಲಿ ರಾಜನೊಬ್ಬ ದೇವರಾಗಿದ್ದು ಕುಮಾರರಾಮ ಮಾತ್ರ. ಅಂಥ ನಾಯಕ ನಮ್ಮಲ್ಲಿ ಆಗಿ ಹೋಗಿದ್ದಾನೆ. ಹೀಗಾಗಿ ಆತನ ಹೆಸರಿಡುವ ಮೂಲಕ ಇತಿಹಾಸ ಉಳಿಸುವ ಕೆಲಸ ಸರ್ಕಾರ ಮಾಡಬೇಕು. ನಿಯಮಾವಳಿಗಳಲ್ಲಿ ಅವಕಾಶವಿಲ್ಲದಿದ್ದರೆ ತಿದ್ದುಪಡಿ ಮಾಡಿ ಮಾಡಲಿ ಎಂದು ಆಗ್ರಹಿಸಿದರು.
ನಮ್ಮ ಸಂಟನೆ ಜಿಲ್ಲೆಯ ಅಭಿವೃದ್ಧಿಗಾಗಿ ಸತತ ಹೋರಾಟ ಮಾಡುತ್ತಿದೆ. ರಸ್ತೆ, ರೈಲ್ವೆ ಸೇತುವೆ ಸೇರಿ ಇತರ ಅಭಿವೃದ್ಧಿ ಕೆಲಸಗಳ ಸಂಬಂಧ ಸಚಿವ, ಸಂಸದ, ಶಾಸಕರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿವೆ. ಈ ಬಗ್ಗೆ ನಮಗೂ ತಿಳಿದಿದೆ. ಎಚ್ಚರಿಸುವ ಕೆಲಸ ನಿರಂತರ ಮುಂದುವರೆಯಲಿದೆ ಎಂದರು.
ಒಕ್ಕೂಟ ಸಂಚಾಲಕರಾದ ಟಿ.ರತ್ನಾಕರ, ಮಹಾಂತೇಶ ಕೊತಬಾಳ, ಅಂದಪ್ಪ ಬೆಣಕಲ್, ಸುಕರಾಜ ತಾಳಕೇರಿ, ರಾಮಣ್ಣ ಕಲ್ಲನವರ, ಗಾಳೆಪ್ಪ ಮುಂಗೋಲಿ, ಬಸವರಾಜ ಶೀಲವಂತರ ಇತರರಿದ್ದರು.