

ಕೊಪ್ಪಳ: ನಗರದ ರೈಲ್ವೆ ನಿಲ್ದಾಣಕ್ಕೆ ಗಂಡುಗಲಿ ಕುಮಾರರಾಮ ಹೆಸರಿಡುವಂತೆ ಪ್ರಗತಿಪರ ಸಂಟನೆಗಳ ಒಕ್ಕೂಟ ಪದಾಧಿಕಾರಿಗಳು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸಂಸದರ ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಿದರು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕನ್ನಡವನ್ನು ಕಟ್ಟಿ ಬೆಳೆಸಿದ, ವಿಜಯನಗರ ಸಾಮ್ರಾಜ್ಯ ಕಟ್ಟುವ ಕನಸು ಕಂಡು ಬಲವಾಗಿದ್ದವ ಕುಮಾರರಾಮ. 13ನೇ ಶತಮಾನದಲ್ಲಿ ಇವರ ಇತಿಹಾಸ ಬರುತ್ತದೆ. ರಾಜನೊಬ್ಬ ದೇವರಾಗಿದ್ದು ಕುಮ್ಮಟ ದುರ್ಗದ ಗಂಡುಗಲಿ ಕುಮಾರರಾಮ ಮಾತ್ರ. ಪರನಾರಿ ಸಹೋದರ ಬಿರುದಾಂಕಿತನಾಗಿದ್ದು, ಮಹಿಳಾ ಕುಲಕ್ಕೆ ಆದರ್ಶವಾಗಿದ್ದ. ಹೀಗಾಗಿ ಆತನ ಹೆಸರಿಡಬೇಕೆಂದರು.
ಹೋರಾಟಗಾರ ಬಸವರಾಜ ಶೀಲವಂತರ ಮಾತನಾಡಿ, ಪ್ರಸ್ತುತ ಎರಡು ಹೆಸರು ಚಾಲ್ತಿಯಲ್ಲಿವೆ. ಅಶೋಕ ವಿಶ್ವ ಮಾನವ. ಬೇರೆಡೆ ಆತನ ಹೆಸರಿಡಲು ಅವಕಾಶವಿದೆ. ಎಂದೂ ಮರೆಯದ ಅದ್ಭುತ ಕೆಲಸ ಮಾಡಿದ, ಕನ್ನಡಿಗ ಕುಮಾರರಾಮ ಹೆಸರನ್ನೇ ಇಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಿದಲಿದೆ. ಬೇರೆ ಹೆಸರಿಟ್ಟರೆ ನಮ್ಮ ತಕರಾರಿದೆ ಎಂದರು.
ಮಹಾಂತೇಶ ಕೊತಬಾಳ, ಎಸ್.ಎ.ಗಾರ ಮಾತನಾಡಿದರು. ಸಂಸದ ರಾಜಶೇಖರ ಹಿಟ್ನಾಳ ಮನವಿ ಸ್ವೀಕರಿಸಿ ಮಾತನಾಡಿ, ಸರ್ವರ ಅಭಿಪ್ರಾಯ ಪಡೆಯಲಾಗುವುದು. ಒಮ್ಮತದಿಂದ ಒಂದೇ ಹೆಸರನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದರು.
ಪ್ರಮುಖರಾದ ರಾಮಣ್ಣ ಕಲ್ಲನವರ, ಸುಕರಾಜ ತಾಳಕೇರಿ, ಅಂದಾನಪ್ಪ ಬೆಣಕಲ್, ಕೆ.ಬಿ.ಗೋನಾಳ, ಜ್ಯೋತಿ ಗೊಂಡಬಾಳ, ನಿಂಗು ಬೆಣಕಲ್, ಎಸ್. ಮಹದೇವಪ್ಪ, ಶಾಂತಯ್ಯ ಅಂಗಡಿ, ನಾಗರಾಜನಾಯಕ ಡೊಳ್ಳಿನ, ದ್ಯಾಮಣ್ಣ ಪೂಜಾರ, ಶೇಖರ ಇಂದ್ರಿಗಿ, ಮುತ್ತು ಪೂಜಾರ, ಸಂಜಯದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿಮಠ, ಗಾಳೆಪ್ಪ ಮುಂಗೊಲಿ ಇತರರಿದ್ದರು.