

ವಿಜಯವಾಣಿ ವಿಶೇಷ ಕೊಪ್ಪಳ
ರಾಯಚೂರು-ಬಳ್ಳಾರಿ-ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿರ್ದೇಶಕ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದಿದ್ದಾರೆ. ಸದ್ಯ ಅಧ್ಯಕ್ಷಗಿರಿಗೆ ಪೈಪೋಟಿ ಶುರುವಾಗಿದ್ದು, ಕೈ ನಾಯಕರ ಟೆನ್ಶನ್ ಹೆಚ್ಚಿಸಿದೆ.
ಕಳೆದ ಅವಧಿ ಆಡಳಿತ ಮಂಡಳಿ ನಿರ್ದೇಶಕರ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ತಡವಾಗಿ ಚುನಾವಣೆ ನಡೆಯುವಂತಾಗಿದೆ. ಅಖಂಡ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ತಲಾ ನಾಲ್ಕು ನಿರ್ದೇಶಕರ ಸ್ಥಾನಗಳಿವೆ. ಒಟ್ಟು 12 ಸ್ಥಾನಗಳಲ್ಲಿ 10ರಲ್ಲಿ ಕಾಂಗ್ರೆಸ್ ಬೆಂಬಲಿತರೇ ಗೆಲುವಿನ ದಡ ಸೇರಿದ್ದಾರೆ. ಇಬ್ಬರು ಇತರರು ವಿಜಯಮಾಲೆ ಧರಿಸಿದ್ದಾರೆ. ಬಹುಮತ ಬಂದ ಹಿನ್ನೆಲೆಯಲ್ಲಿ ಕೈ ಬೆಂಬಲಿತರು ಅಧ್ಯಕ್ಷರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ಆಕಾಂಗಳಲ್ಲಿ ಅಧ್ಯಕ್ಷ ಗಾದಿ ಹಿಡಿವ ಆಸೆ ಸಾಮಾನ್ಯಕ್ಕಿಂತ ಹೆಚ್ಚೇ ಕಂಡುಬರುತ್ತಿದೆ. ಶಾಸಕ, ಸಚಿವ, ಸಂಸದರು ಹಾಗೂ ವಿಪ ಸದಸ್ಯರ ಮೂಲಕ ತಮಗೆ ಅವಕಾಶ ಕೊಡಿಸುವಂತೆ ದುಂಬಾಲು ಬಿದ್ದಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ.
ಅಧ್ಯಕ್ಷ ಭೀಮಾನಾಯ್ಕ್ ಕಳೆದ ಅವಧಿಯಿಂದ ಈ ವರೆಗೆ ರಾಬಕೊವಿ ಅಧ್ಯಕ್ಷರಾಗಿದ್ದಾರೆ, ಕಳೆದೆರಡು ವರ್ಷದಿಂದ ಕೆಎಂಎ್ ಅಧ್ಯಕ್ಷರಾಗಿಯೂ ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಈ ಬಾರಿ ಬೇರೆಯವರಿಗೆ ಒಕ್ಕೂಟದ ಅಧ್ಯಕ್ಷ ಸ್ಥಾನ ನೀಡುವಂತೆ ನಿರ್ದೇಶಕರು ತಮ್ ಸಹಜ ಬೇಡಿಕೆ ಮುಂದಿರಿಸಿದ್ದಾರೆ. ಅದರಲ್ಲೂ ಕಳೆದ ಏಳು ವರ್ಷದಿಂದ ಅಖಂಡ ಬಳ್ಳಾರಿ ಜಿಲ್ಲೆಯವರೇ ಒಕ್ಕೂಟದ ಅಧ್ಯಕ್ಷರಾಗಿದ್ದು, ರಾಯಚೂರು, ಕೊಪ್ಪಳಕ್ಕೂ ಪ್ರಾತಿನಿಧ್ಯ ದೊರಕಿಸಿಕೊಡಬೇಕೆಂಬ ಒತ್ತಾಯ ಬಲವಾಗಿ ಪ್ರತಿಪಾದಿಸಲಾಗುತ್ತಿದೆ. ಪರಿಣಾಮ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕರಲ್ಲೇ ಎರಡು ಬಣಗಳಾಗಿವೆ.
ನಿರ್ದೇಶಕ ಚುನಾವಣೆಯಲ್ಲಿಯೇ ದಾಡಸಿತನ ಪ್ರದರ್ಶಿಸಿರುವ ಭೀಮಾನಾಯ್ಕ್ ಈ ಅವಧಿಗೂ ಅಧ್ಯಕ್ಷರಾಗಲು ತೀವ್ರ ಕಸರತ್ತು ನಡೆಸಿದ್ದಾರೆ. ತಮ್ಮನ್ನು ಬೆಂಬಲಿಸುವಂತೆ ನಿರ್ದೇಶಕರನ್ನು ಓಲೈಸುತ್ತಿದ್ದಾರೆ. ಮಾಜಿ ಶಾಸಕರಾಗಿರುವ ನಾಯ್ಕ್ ಸಿಎಂ ಹಾದಿಯಾಗಿ ಸಚಿವರು, ಶಾಸಕರಡೊನೆ ಉತ್ತಮ ಒಡನಾಟ ಹೊಂದಿದ್ದು ಪ್ರಭಾವ ಬಳಸಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಇತ್ತ ಬೇರೆಯವರಿಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿರುವ ಕೊಪ್ಪಳ&ರಾಯಚೂರು ಭಾಗದ ನಿರ್ದೇಶಕರು ತಮ್ಮ ತಮ್ಮ ಕ್ಷೇತ್ರದ ಶಾಸಕರು, ಸಂಸದರ ಹಾಗೂ ಸಚಿವರ ಮೂಲಕ ತಮ್ಮ ಜಿಲ್ಲೆಗೆ ಅಧ್ಯಕ್ಷರ ಹುದ್ದೆ ತರಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಕೈ ಪಾಳಯಕ್ಕೆ ಬಿಸಿತುಪ್ಪ
12 ನಿರ್ದೇಶಕರು ಚುನಾಯಿತರಾಗಿದ್ದರೆ, ಸರ್ಕಾರ, ಒಕ್ಕೂಟ ಎಂಡಿ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ, ಪಶುಸಂಗೋಪನಾ, ಸಹಕಾರ ಇಲಾಖೆ ಪ್ರತಿನಿಧಿಗಳು ಅಧ್ಯಕ್ಷರ ಆಯ್ಕೆಗೆ ಮತಚಲಾಯಿಸುವ ಅವಕಾಶವಿದೆ. ಸರ್ಕಾರ ಸೂಚಿಸುವವರಿಗೆ ಅಧ್ಯಕ್ಷಗಿರಿ ಯೋಗ ಒಲಿಯಲಿದೆ. ಕಾಂಗ್ರೆಸ್ ಬೆಂಬಲಿತರದಲ್ಲದವರು ಇಬ್ಬರಿದ್ದು, ಬಾಕಿ ನಿರ್ದೇಶರು ಕೈ ಶಾಸಕರ ಆಪ್ತರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಆಕಾಂಗಳ ಮನವೊಲಿಸುವಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಎಲ್ಲರೂ ತಮ್ಮ ತಮ್ಮ ಜಿಲ್ಲೆಗೆ ಆದ್ಯತೆ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇದೇ ವಿಷಯವಾಗಿ ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಶಾಸಕರು, ನಿರ್ದೇಶಕರ ಸಭೆ ನಿಗದಿಯಾಗಿದೆ ಎನ್ನಲಾಗಿದ್ದು, ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.
ಕೊಪ್ಪಳಕ್ಕೆ ಒಲಿವುದೇ ಯೋಗ
ರಾಬಕೊವಿ ಒಕ್ಕೂಟದಲ್ಲಿ ಕೊಪ್ಪಳ ಜಿಲ್ಲೆಯ ಪಾತ್ರವೂ ಹಿರಿದಾಗಿದ್ದು, ಹಾಲು ಉತ್ಪಾದಕರ ಸಂಗಳೂ ಅಧಿಕ ಸಂಖ್ಯೆಯಲ್ಲಿವೆ. ಕಳೆದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಗೆ ಆದ್ಯತೆ ದೊರೆತಿದ್ದು, ಈ ಬಾರಿ ಕೊಪ್ಪಳಕ್ಕೆ ನೀಡುವಂತೆ ಒತ್ತಡ ಹೆಚ್ಚಿದೆ. ತೆರೆ ಮರೆಯಲ್ಲೂ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿದೆ. ನಿರ್ದೇಶಕರು ಕಸರತ್ತು ಪ್ರದರ್ಶಿಸುತ್ತಿದ್ದು, ಅಂತಿಮವಾಗಿ ಸರ್ಕಾರದ ಒಲವು ಯಾರಿಗೆಂಬ ಕುತೂಹಲ ಹೆಚ್ಚಿಸಿದೆ. ಕೊಪ್ಪಳ ಜಿಲ್ಲೆಯ ಕೈ ನಾಯಕರು ಜಿಲ್ಲೆಗೆ ಆದ್ಯತೆ ಕೊಡಿಸುವರಾ ಅಥವಾ ಬಿಟ್ಟುಕೊಡುವರಾ ಎಂಬುದರತ್ತ ಉತ್ಪಾದಕರ ಸಂಗಳು ಹಾಗೂ ನಿರ್ದೇಶಕರ ಚಿತ್ತ ನೆಟ್ಟಿದೆ.