

ಕೊಪ್ಪಳ: ಅಲೆಮಾರಿ ಸಮುದಾಯದ ಏಳು ಜನರ ಮೇಲೆ ದಾಖಲಿಸಿರುವ ಸುಳ್ಳು ದೂರು ವಾಪಸ್ ಪಡೆಯಲು ಆಗ್ರಹಿಸಿ ರಾಜ್ಯ ಪರಿಶಿಷ್ಟ ಜಾತಿ/ಚನ್ನದಾಸರ/ಹೊಲೆಯದಾಸರ/ಮಾಲದಾಸರ/ಜನಸೇವಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಎಚ್.ಆಂಜನೇಯ ಅಧ್ಯಕ್ಷತೆಯಲ್ಲಿ ಜು.5ರಂದು ಬೆಂಗಳೂರಿನಲ್ಲಿ ಅಲೆಮಾರಿ ಸಮುದಾಯದವರ ಸಭೆ ನಡೆದಿದೆ. ಈ ವೇಳೆ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯೆ ಜಿ.ಪಲ್ಲವಿ ತಮ್ಮ ಮೇಲೆ 7 ಜನರು ಅವಾಚ್ಯವಾಗಿ ನಿಂದಿಸಿದ್ದು ಮಾನಸಿಕ, ದೈಹಿಕ ಕಿರುಕುಳ ಕೊಟ್ಟಿದ್ದಾರೆಂದು ದೂರು ನೀಡಿದ್ದಾರೆ. ಅಲೆಮಾರಿಗಳ ಕ್ಷೇಮ ಕಾಯಬೇಕಾದ ಅಧ್ಯಕ್ಷರು ಸುಳ್ಳು ದೂರು ದಾಖಲಿಸಿದ್ದಾರೆ. ಇದು ಸರಿಯಾದ ನಡೆಯಲ್ಲ. ಇದರಿಂದ ಸಣ್ಣ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಏಕಪಯವಾಗಿ ಕೆಲಸ ಮಾಡುತ್ತಿರುವ ಅಧ್ಯಕ್ಷರ ನಡೆ ಪ್ರಶ್ನಿಸಿದ್ದಕ್ಕೆ ಸುಳ್ಳು ದೂರು ದಾಖಲಿಸಿದ್ದು ತಕ್ಷಣ ವಾಪಸ್ ಪಡೆಯಬೇಕು. ನಿಗಮದ ವಿಶೇಷ ಅಧಿಕಾರಿ ಆನಂದ ಏಕಲವ್ಯ ಅವರನ್ನು ಹುದ್ದೆಯಿಂದ ಅಮಾನತು ಮಾಡಬೇಕು. ಸಣ್ಣ ಸಮುದಾಯಗಳ ಮೇಲೆ ದೌರ್ಜನ್ಯ ತಡೆಯಬೇಕು. ಪಲ್ಲವಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ಒತ್ತಾಯಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಸಂಜಯದಾಸ ಕೌಜಗೇರಿ, ಪದಾಧಿಕಾರಿಗಳಾದ ಸೋಮಣ್ಣ ಕಲಕೇರಿ, ತಿಮ್ಮಣ್ಣ ದಾಸರ, ನಾಗರಾಜ ಮಾಲದಾಸರ, ಹನುಮಂತಪ್ಪ ಸುಂಕಾಪುರ, ಯಂಕಪ್ಪ ಹೆಬ್ಲಿ, ಮಾರೆಪ್ಪ ಇತರರಿದ್ದರು.