

ಕೊಪ್ಪಳ: ಮಕ್ಕಳು ದೇಶದ ಭವಿಷ್ಯ. ಅವರಿಗೆ ಪೌಷ್ಟಿಕ ಆಹಾರ ನೀಡಿ ಆರೋಗ್ಯವಂತರನ್ನಾಗಿ ಮಾಡುವುದು ಪಾಲಕರ ಕರ್ತವ್ಯ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌಷ್ಟಿಕ ಆಹಾರ ಪ್ರತಿ ಮಗುವಿನ ಹಕ್ಕು. ಕೇಂದ್ರ, ರಾಜ್ಯ ಸರ್ಕಾರ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪೋಷಣ್ ಅಭಿಯಾನ ನಡೆಸುತ್ತಿದೆ. ಅಭಿಯಾನ ಯಶಸ್ವಿಗೊಳಿಸಿ. ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗಲೇ ಪೌಷ್ಟಿಕ ಆಹಾರ ಸೇವಿಸಿದಲ್ಲಿ ಮಗು ಸಹ ಆರೋಗ್ಯವಾಗಿರಲಿದೆ. ಎಲ್ಲರು ತಮ್ಮ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಬೇಕೆಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ.ಶೆಟ್ಟಪ್ಪನವರ್ ಮಾತನಾಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಗರ್ಭಿಣಿ, ಮಕ್ಕಳ ಆರೋಗ್ಯ ಬಗ್ಗೆ ಕಾಳಜಿವಹಿಸಿ. ಪೌಷ್ಠಿಕ ಶಿಬಿರ, ತಾಯಂದಿರ ಶಿಬಿರಗಳಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಬಳ್ಳಾರಿ ಕೇಂದ್ರ ಸಂವಹನ ಇಲಾಖೆ ಅಧಿಕಾರಿ ರಾಮಕೃಷ್ಣ ಎನ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಮಾತನಾಡಿದರು. ಸಾಹಿತಿ ಅನ್ನಪೂರ್ಣ ಮನ್ನಾಪುರ ಬಾಲ್ಯವಿವಾಹ ತಡೆ, ಪೌಷ್ಟಿಕ ಆಹಾರ ಕುರಿತು ಜಾಗೃತಿ ಗೀತೆ ಹಾಡಿದರು. ಕಾರ್ಯಕ್ರಮ ಅಂಗವಾಗಿ ರಂಗೋಲಿ ಸ್ಪರ್ಧೆ, ಪೌಷ್ಟಿಕ ಆಹಾರ ಸ್ಪರ್ಧೆ, ಹಣ್ಣು ಮತ್ತು ತರಕಾರಿಗಳಿಂದ ಕಾಲಾಕೃತಿ ತಯಾರಿಕೆ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೂಪಾ ಗಂಧದ ಹಾಗೂ ಶಿವಶರಣಪ್ಪ ಗದ್ದಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಇತರರಿದ್ದರು.