ಕೊಪ್ಪಳ: ಅಪ್ರಾಪ್ತಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ನಗರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಆ.4ರಂದು ತೀರ್ಪು ನೀಡಿದೆ.
ಸಿಂಧನೂರು ತಾಲೂಕಿನ ಕನಿಹಾಳ ಗ್ರಾಮದ ಅಮರೇಶ ಬಡಿಗೇರ ಶಿೆಗೆ ಗುರಿಯದಾತ. ಅಜ್ಜಿ ಮನೆಯಲ್ಲಿದ್ದ ಅಪ್ರಾಪ್ತಳು ನಿತ್ಯ ಕಾಲೇಜಿಗೆ ಹೋಗುತ್ತಿದ್ದಳು. ಬಾಲಕಿ ಹಿಂಬಾಲಿಸಿದ ಅಮರೇಶ ಪ್ರೀತಿಸುವುದಾಗಿ ಒತ್ತಾಯಿಸಿದ್ದಾನೆ. 2023ರ ಅಕ್ಟೋಬರ್ 3ರಂದು ಬೆಂಗಳೂರಿಗೆ ಕರೆದೊಯ್ದಿದ್ದಾನೆ. ತಾವರಗೇರಾದಿಂದ ಅಪಹರಿಸಿಕೊಂಡು ಬೆಂಗಳೂರಿನ ಕೆಂಗೇರಿ ಹತ್ತಿರದ ರಾಮಸಂದ್ರ ಗ್ರಾಮಕ್ಕೆ ಕರೆದೊಯ್ದಿದ್ದ. ಬಾಡಿಗೆ ಮನೆ ಪಡೆದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ತಾವರಗೇರಾ ಪಿಎಸ್ಐ ಮಲ್ಲಪ್ಪ ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಕುಷ್ಟಗಿ ಸಿಪಿಐ ಯಶವಂತ ಎಚ್.ಬಿಸನಳ್ಳಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಅಮರೇಶ ದೋಷಿ ಎಂದು ತೀರ್ಮಾನಿಸಿದೆ. ನ್ಯಾಯಾಧೀಶರಾದ ಕುಮಾರ ಡಿ.ಕೆ.ಅವರು ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆ.4ರಂದು ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ. ತಾವರಗೇರಾ ಠಾಣೆ ಸಿಬ್ಬಂದಿ ರಂಗನಾಥ, ವಿರೇಶ ಸಾಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾಗಿ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.