ಕೊಪ್ಪಳ: ಅಪ್ರಾಪ್ತಳನ್ನು ಅಪಹರಿಸಿ ಅತ್ಯಾಚಾರ ಎಸಗಿದವನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ) ಸೋಮವಾರ (ಸೆ.8) ಆದೇಶಿಸಿದೆ.
ಕೊಪ್ಪಳದ ಶಿವಾನಂದ ಕಡಿ ಶಿಕ್ಷೆಗೆ ಗುರಿಯಾದಾತ. ಶಿವಾನಂದ ಬಾಲಕಿ ತಂದೆಗೆ ತಮ್ಮ ಮಗಳನ್ನು ನೀಡಿ ಮದುವೆ ಮಾಡುವಂತೆ ಕೇಳಿದ್ದ. ಆದರೆ, ಮದುವೆ ವಯಸ್ಸಾಗದ ಕಾರಣ ನಿರಾಕರಿಸಿದ್ದಾರೆ. 2022ರ ೆಬ್ರವರಿ 17ರಂದು ಬಾಲಕಿ ಓದುವ ಕಾಲೇಜಿಗೆ ತೆರಳಿದ ಶಿವಾನಂದ, ಮದುವೆಯಾಗುವುದಾಗಿ ಒತ್ತಾಯ ಮಾಡಿ ಕಲಬುರಗಿ ಜಿಲ್ಲೆಯೆ ಜೇವರ್ಗಿ ತಾಲೂಕಿನ ನಾರಾಯನಪುರ ಗ್ರಾಮದ ಸಂಬಂಧಿ ಮನೆಗೆ ಕರೆದೊಯ್ದಿದ್ದ. ಇಬ್ಬರು ಮದುವೆಯಾಗಿದ್ದೇವೆ. ಕೆಲಸ ಸಿಕ್ಕ ಬಳಿಕ ಹೋಗುತ್ತೇವೆಂದು ಹೇಳಿ ಕೆಲ ದಿನ ಅಲ್ಲೇ ವಾಸವಿದ್ದರು. ಈ ಅವಧಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಬಾಲಕಿ ತಂದೆ ಈ ಬಗ್ಗೆ ಕೊಪ್ಪಳ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮುಖ್ಯ ಪೇದೆ ಶರಣಪ್ಪ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಪಿಎಸ್ಐ ಯಲ್ಲಪ್ಪ ಮತ್ತು ಪಿಐ ಸಿ.ಬಿ.ಚಿಕ್ಕೋಡಿ ಮುಂದಿನ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಹನುಮಂತಗೌಡ ತನಿಖಾ ಸಹಾಯಕರಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕುಮಾರ ಡಿ.ಕೆ. ಅವರು ಶಿವಾನಂದ ದೋಷಿ ಎಂದು ತೀರ್ಮಾನಿಸಿದ್ದಾರೆ. 20 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಸ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದಾರೆ. ಮಹಿಳಾ ಠಾಣೆ ಸಿಬ್ಬಂದಿ ಪ್ರಕಾಶ, ಬಾಳಪ್ಪ ಸಾಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಹಕರಿಸಿದ್ದಾಗಿ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.