

ಕೊಪ್ಪಳ: ವಿಶ್ವಗುರು ಎನಿಸಿಕೊಂಡಿರುವ ಪ್ರಧಾನಿ ಮೋದಿ ಕದನ ವಿರಾಮ ಘೋಷಿಸಲಿಲ್ಲ. ಅಮೆರಿಕದ ಅಧ್ಯಕ್ಷ ಟ್ರಂಪ್ ಮಾತಿನಂತೆ ಯುದ್ಧ ನಿಲ್ಲಿಸಿದರು. ಈಗ ವಿಶ್ವಗುರು ಯಾರು ಎಂಬುದು ಇದರಿಂದ ಬಹಿರಂಗವಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವಧಿಯಲ್ಲಿ ನಮ್ಮ ಸೈನಿಕರು ಪಾಕಿಸ್ತಾನದ ಲಾಹೋರ್ ಪ್ರದೇಶ ವಶಕ್ಕೆ ಪಡೆದಿದ್ದರು. ಸಾವಿರಾರು ಪಾಕ್ ಸೈನಿಕರನ್ನು ಶಸ್ತ್ರಾಸ್ತ ಸಮೇತ ಬಂಧಿಸಿದ್ದರು. ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗೆ ಎಂದು ಬಣ್ಣಿಸಿದ್ದರು. ಬಿಜೆಪಿಯವರು ಎರಡು ದಿನದ ಆಪರೇಷನ್ ಸಿಂಧೂರವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ವಿಶ್ವಗುರು ಎನಿಸಿಕೊಂಡವರು ಅಮೆರಿಕದ ಮುಂದೆ ಮಣಿದಿದ್ದು ಸರಿಯಲ್ಲ. ದೇಶಭಕ್ತಿ, ಸೈನಿಕರಿಗೆ ಗೌರವ ನೀಡುವಿಕೆ, ಬದ್ಧತೆಯನ್ನು ಕಾಂಗ್ರೆಸ್ಸಿಗರು ಬಿಜೆಪಿಯವರಿಂದ ಕಲಿಯುವ ಅವಶ್ಯಕತೆಯಿಲ್ಲವೆಂದು ತಿರುಗೇಟು ನೀಡಿದರು.
ದೇಶಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ. ಹೆದ್ದಾರಿ, ಡ್ಯಾಂಗಳನ್ನು ನಿರ್ಮಿಸಿದ್ದು ಕಾಂಗ್ರೆಸ್. ನಮ್ಮ ಯೋಜನೆಗಳ ಹೆಸರು ಬದಲಿಸಿ ಮುಂದುವರೆಸಿಕೊಂಡು ಹೊರಟಿದ್ದಾರೆ. ಕಕ ಭಾಗಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಕೊಡುಗೆ ಅಪಾರ. 371(ಜೆ) ಜಾರಿ ಅವರ ಕೊಡುಗೆ. ಅಂಥ ನಾಯಕರ ಬಗ್ಗೆ ಬಿಜೆಪಿಗರು ಕೀಳಾಗಿ ಮಾತಾಡುವುದು ಸಹಿಸಲಾಗದು. ಕಲಬುರಗಿಯಲ್ಲಿ ರ್ಖಗೆ ಅವರ ವಿರುದ್ಧ ಬಿಜೆಪಿಗರು ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರದ ಬಳಿ ತೆರಳಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನಕ್ಕೆ ಒತ್ತಾಯ ಮಾಡಲಿ ಎಂದು ಆಗ್ರಹಿಸಿದರು.
ಪ್ರಿಯಾಂಕ್ ರ್ಖಗೆ ಹಲ್ಲೆ ಮಾಡಿಸುವ ಮನಸ್ಥಿತಿಯವರಲ್ಲ. ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ. ಹಿಂದೆ ಇದೇ ನಾರಾಯಣಸ್ವಾಮಿ ರ್ಖಗೆ ಮನೆ ಬಾಗಿಲು ಕಾಯುತ್ತಿದ್ದರೆಂದು ಟೀಕಿಸಿದರು.