

ಕೊಪ್ಪಳ: ಕನಕಗಿರಿ ತಾಲೂಕಿಗೆ ಪ್ರತ್ಯೇಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ರಚಿಸಿ ಸಹಕಾರಿ ಇಲಾಖೆ ಜಿಲ್ಲಾ ಉಪ ನಿಬಂಧಕ ದಸ್ತರಿಗಿ ಅಲಿ ನ.11ರಂದು ಆದೇಶಿಸಿದ್ದಾರೆ.
ಗಂಗಾವತಿಯಿಂದ ಬೇರ್ಪಟ್ಟು ಕನಕಗಿರಿ ಪ್ರತ್ಯೇಕ ತಾಲೂಕಾಗಿ ಅಸ್ತಿತ್ವಕ್ಕೆ ಬಂದಿದೆ. ಪ್ರತ್ಯೇಕ ಪಿಕಾರ್ಡ್ ಬ್ಯಾಂಕ್ ರಚನೆಗೆ 540 ರೈತರಿಂದ 6 ಲಕ್ಷರೂ. ಸಂಗ್ರಹಿಸಿದ ಮುಖ್ಯ ಪ್ರವರ್ತಕ ಅರ್ಜಿ ಸಲ್ಲಿಸಿದ್ದಾರೆ. ಆರಂಭದಲ್ಲಿ ಇನ್ನು ಕೆಲವರನ್ನು ಷೇರುದಾರರಾಗಿ ಮಾಡಿಕೊಳ್ಳಲು ಸೂಚಿಸಿದ ಅಧಿಕಾರಿ ದಿನ ದೂಡಿದ್ದಾರೆ. ಮರು ಅರ್ಜಿ ಸಲ್ಲಿಸಿದರೂ, ಸಚಿವ, ಶಾಸಕರು ಒತ್ತಡ ಹೇರಿದ್ದಾರೆಂದು ವರ್ಷ ಕಳೆದಿದೆ. ಇದನ್ನು ಪ್ರಶ್ನಿಸಿ ಮುಖ್ಯ ಪ್ರವರ್ತಕ ವಾಗೀಶ ಧಾರವಾಡ ಹೈ ಕೋರ್ಟ್ಗೆ ರಿಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತಿಂಗಳೊಳಗೆ ನೋಂದಣಿ ಮಾಡುವಂತೆ ನಿರ್ದೇಶಿಸಿತ್ತು. ಆದರೂ, ಮಾಡಿರಲಿಲ್ಲ.
ಈ ಬಗ್ಗೆ ವಿಜಯವಾಣಿ ನ.9ರಂದು "ಪಿಕಾರ್ಡ್ ನೋಂದಣಿಗೆ ಹಿಂದೇಟು' ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿಬಂಧಕರು ಬ್ಯಾಂಕ್ ನೋಂದಣಿ ಮಾಡಿಕೊಡುವುದಾಗಿ ತಿಳಿಸಿದ್ದರು. ಅದರಂತೆ ನ.11ರಂದು ಕನಕಗಿರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ಹೆಸರಿನಲ್ಲಿ ನೋಂದಣಿ ಮಾಡಿ ಆದೇಶಿಸಿದ್ದಾರೆ. ವರ್ಷಾನುಗಟ್ಟಲೇ ನನೆಗುದಿಗೆ ಬಿದ್ದಿದ ಬ್ಯಾಂಕ್ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದಕ್ಕೆ ಷೇರುದಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಮೇಲೆ ಬೆಳಕು ಚೆಲ್ಲಿದ ವಿಜಯವಾಣಿಗೆ ಧನ್ಯವಾದ ತಿಳಿಸಿದ್ದಾರೆ.