ಅಕ್ಕಿ ಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

district koppal pds rice protest
Published on

ಕೊಪ್ಪಳ: ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಡುತ್ತಿರುವ ವಾಣಿಜ್ಯೋದ್ಯಮಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂದ ಜಿಲ್ಲಾ ಪದಾಧಿಕಾರಿಗಳು ಗುರುವಾರ ನಗರದ ಬಸ್​ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರು ಹಸಿವಿನಿಂದ ಇರಬಾರದೆಂದು ಪಡಿತರ ವಿತರಿಸುತ್ತಿವೆ. ಅಧಿಕಾರಿಗಳು, ವಾಣಿಜ್ಯೋದ್ಯಮಿಗಳು ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಇತ್ತೀಚೆಗೆ ಗಂಗಾವತಿಯಲ್ಲಿ ಅಕ್ರಮವಾಗಿ ಪಡಿತರ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಕೇವಲ ಅಧಿಕಾರಿಗಳ ಮೇಲೆ ಕ್ರಮವಾಗಿದೆ. ಆದರೆ, ದಾಸ್ತಾನು ಮಾಡಿದವ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತದ ಈ ನಡೆ ಅನುಮಾನ ಮೂಡಿಸಿದೆ. ವಾಣಿಜ್ಯೋದ್ಯಮಿಗಳೂ ಇದರಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ಪ್ರಕರಣ ಗಂಭೀರವಾಗಿ ಪರಿಗಣಿಸಬೇಕು. ಅಕ್ರಮ ದಾಸ್ತಾನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಮಗ್ರ ತನಿಖೆ ನಡೆಸಬೇಕು. ಅಕ್ರಮಕ್ಕೆ ಕುಮ್ಮಕ್ಕು ನೀಡುವ ಅಧಿಕಾರಿಗಳು, ವಾಣಿಜ್ಯೋದ್ಯಮಿಗಳನ್ನು ಮಟ್ಟ ಹಾಕಬೇಕು. ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲ ಬಯಲು ಮಾಡಬೇಕು. ಬಡವರಿಗೆ ಸರಿಯಾಗಿ ಪಡಿತರ ಜತೆಗೆ 14 ಅಗತ್ಯ ವಸ್ತುಗಳನ್ನು ಪೂರೈಸುವಂತೆ ಒತ್ತಾಯಿಸಿದರು.

ಸಂಚಾಲಕರಾದ ಬಸವರಾಜ- ಎಂ-., ಸುಂಕಪ್ಪ ಗದಗ್​, ಹುಸೇನಪ್ಪ ಕೆ., ಹನುಮಂತ ಸಿಡ್ಲ, ದುರಗಮ್ಮ ಸಿಂಗನಾಳ, ನಾಗಮ್ಮ ಸಿಂಗನಾಳ, ರಾಮಣ್ಣ ದೊಡ್ಡಮನಿ, ಶರಣಮ್ಮ ಗದಗಿನಮನಿ, ಬಸಮ್ಮ ಗದಗಿನಮನಿ, ಹನುಮಂತ ಪಡಚಿಂತಿ, ಪಕೀರಮ್ಮ ಮಿರಗನತಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net