ಮೀಸಲು ಹೋರಾಟ ಮುಂದುವರಿಕೆ : ಕೂಡಲ ಸಂಗಮ ಶ್ರೀ

Published on

ಕೊಪ್ಪಳ: ಪಂಚಮಸಾಲಿ 2ಎ ಮೀಸಲು ನೀಡದೆ ರಾಜ್ಯ ಸರ್ಕಾರ ದ್ರೋಹ ಮಾಡಿದೆ. ಡಿ. 23ರಿಂದ ಗ್ರಾಮ, ತಾಲೂಕು ಮಟ್ಟದಲ್ಲಿ ಹೋರಾಟ ಮುಂದುವರಿಸಲಾಗುವುದು. ಬಳಿಕ ಸಮುದಾಯ ಜನರೊಡನೆ ಸಭೆ ನಡೆಸಿ ಜ.14ರ ಸಂಕ್ರಾಂತಿಯಂದು ಕೂಡಲ ಸಂಗಮದಿಂದ 8ನೇ ಹಂತದ ಹೋರಾಟ ಆರಂಭಿಸಲಾಗುವುದೆಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ರಾಜ್ಯದಲ್ಲಿ ಆಡಳಿತ ಮಾಡಿದ ಲಿಂಗಾಯತ ಸಿಎಂಗಳು ಯಾವ ಸಮುದಾಯದವರ ಮೇಲೆ ಹಲ್ಲೆ ಮಾಡಿಸಿರಲಿಲ್ಲ. ಸಿಎಂ ಸಿದ್ದರಾಮಯ್ಯ ಲಾಠಿಚಾರ್ಜ್​ ಮಾಡಿಸಿದ್ದು ಖಂಡನೀಯ. ತಕ್ಷಣ ಅವರು ಸಮುದಾಯದ ಕ್ಷಮೆ ಕೇಳಿ, ಹಲ್ಲೆ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕು. ಹೋರಾಟದಲ್ಲಿ ದೈಹಿಕ ಹಲ್ಲೆಗೊಳಗಾದವರ ಮನೆ ಮನೆಗೆ ಡಿ.23ರಿಂದ ಭೇಟಿ ನೀಡಿ ಸಮಾಧಾನ ಹೇಳುತ್ತೇನೆ. ಜನೆವರಿಯಲ್ಲಿ ಮತ್ತಮ್ಮೆ ಸಮುದಾಯ ಜನರೊಡನೆ ಸಭೆ ನಡೆಸಿ 8 ನೇ ಹಂತದ ಹೋರಾಟ ರೂಪುರೇಷೆ ರೂಪಿಸಲಾಗುವುದೆಂದು ಶುಕ್ರವಾರ ತಿಳಿಸಿದರು.

ಸಮುದಾಯದ ಜನರಿಗೆ ಸರ್ಕಾರ ಎಸಗಿದ ಅನ್ಯಾಯ ತಿಳಿಸುವೆ. ಗ್ರಾಮ, ತಾಲೂಕು ಮಟ್ಟದಲ್ಲಿ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಸಮಾವೇಶ ಮಾಡುತ್ತೇವೆ. ಚನ್ನಮ್ಮನ ಸಂಸ್ಥಾನ ಹಾಳು ಮಾಡಲು ಬ್ರಿಟಿಷರು ಮಲ್ಲಪ್ಪ ಶೆಟ್ರನ್ನ ಬಳಸಿಕೊಂಡಂತೆ ಇಂದು ಸರ್ಕಾರ ನಮ್ಮ ಸಮುದಾಯದವರನ್ನೆ ಬಳಸಿಕೊಂಡು ನಮ್ಮ ವಿರುದ್ಧ ಮಾತನಾಡಿಸುತ್ತಿದೆ. ಅವರೆಲ್ಲ ಸಮುದಾಯ ದ್ರೋಹಿಗಳು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಹರಿಹಾಯ್ದರು.

ವಿಪ ಸದಸ್ಯ ಸಿಟಿ ರವಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ದೇಶದ ಹೆಣ್ಣಿನ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೂ ತಪ್ಪು. ಸದನದ ಒಳಗಾಗಲಿ, ಹೊರಗಾಗಲಿ ಯಾರೇ ಹೆಣ್ಣಿಗೆ ನಿಂದಿಸಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net