ಮೀಸಲು ಹೋರಾಟ ನಿಲ್ಲುವುದಿಲ್ಲ, ಪಂಚಮಸಾಲಿ ಸಮುದಾಯದವರ ಎಚ್ಚರಿಕೆ

district koppal panchamasali community protest
Published on

ಕೊಪ್ಪಳ: ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್​ ಮಾಡಿದ್ದನ್ನು ಖಂಡಿಸಿ ಪಂಚಮಸಾಲಿ ಸಮುದಾಯದ ಜನರು ಗುರುವಾರ ನಗರದ ಹೊರವಲಯದ ಹೆದ್ದಾರಿ 64ರಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಮೀಸಲಾತಿ ನಮ್ಮ ಹಕ್ಕು. ಈ ಬಗ್ಗೆ ಪಂಚಮಸಾಲಿ ಸಂ ಮೂರು ದಶಕಗಳಿಂದ ಹೋರಾಟ ಮಾಡುತ್ತಿದೆ. ಆಯಾ ಸಿಎಂಗಳಿಗೆ ಮನವಿ ಸಲ್ಲಿಸಿದ್ದೇವೆ. ಎಲ್ಲರೂ ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್​ ಮಾಡಿಸಿದ್ದಾರೆ. ಇದಕ್ಕೆ ನಾವೆಲ್ಲ ಹೆದರುವುದಿಲ್ಲ. ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನ್ಯಾಯಯುತವಾಗಿ ಹಕ್ಕು ಕೇಳಿದರೆ ಹಲ್ಲೆ ಮಾಡಿಸುವುದು ಯಾವ ನ್ಯಾಯವೆಂದು ಆಕ್ರೋಶ ಹೊರಹಾಕಿದರು.

ತಕ್ಷಣ ಸಿಎಂ ಸಿದ್ದರಾಮಯ್ಯ ಸಮುದಾಯದ ಕ್ಷಮೆ ಕೇಳಬೇಕು. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು. ಇದು ಸಾಂಕೇತಿಕ ಪ್ರತಿಭಟನೆ. ಮುಂದೆ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು. ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನೂರಾರು ಜನರು ಚನ್ನಮ್ಮ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದರು. ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆ ತಡೆದಿದ್ದರಿಂದ ಟ್ರಾಫಿಕ್​ ಉಂಟಾಯಿತು. ಮುಂಜಾಗ್ರತ ಕ್ರಮವಾಗಿ ಸಾಕಷ್ಟು ಪೊಲೀಸರು ಬಂದೋಬಸ್ತ್​ ಒದಗಿಸಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್​, ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ, ಮುಖಂಡರಾದ ಶರಣಪ್ಪ ಆನೆಗೊಂದಿ, ಶರಣಪ್ಪ ಹ್ಯಾಟಿ, ಶರಣಪ್ಪ ಮೇಟಿ ಓಜನಹಳ್ಳಿ, ಮಂಜುನಾಥ ಈಶ್ವರಗೌಡ್ರ, ದೇವರಾಜ ಹಾಲಸಮುದ್ರ, ಬಸವರಾಜ ಇಂದರಗಿ, ಶಿವಪುತ್ರಪ್ಪ ಮೇಟಿ, ಪ್ರತಿಮಾ ಪಾಟೀಲ್​, ಕೀರ್ತಿ ಪಾಟೀಲ್​, ಗೀತಾ ಬಳ್ಳಾರಿ, ಸುಜಾತ ಪಟ್ಟಣಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net