ಕೊಪ್ಪಳ: ಮೀಸಲು ಪ್ರಮಾಣ ಹೆಚ್ಚಳ ಮಾಡಿ ನಮಗೆ ಮೀಸಲಾತಿ ನೀಡಬೇಕು. ಆದರೆ, ಹಿಂದಿನ ಸರ್ಕಾರ ಇನ್ನೊಬ್ಬರ ಮೀಸಲು ಕಿತ್ತು ನಮಗೆ ನೀಡಿತು. ಇದು ಸರಿಯಲ್ಲ. ಬದಲಿಗೆ ಮೀಸಲು ಪ್ರಮಾಣ ಹೆಚ್ಚಿಸಿ ಹಂಚಿಕೆ ಮಾಡಿದರೆ ಎಲ್ಲರಿಗೂ ನ್ಯಾಯ ಸಿಗಲಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಮೀಸಲಾತಿ ಎಂಬುದು ಅನುದಾನವಲ್ಲ. ಕಾನೂನಾತ್ಮಕವಾಗಿಯೇ ಪಡೆಯಬೇಕು. 1994ರಿಂದ ಹೋರಾಟ ಇದೆ. ಎಲ್ಲ ವೀರಶೈವ ಲಿಂಗಾಯತರಿಗೆ ಕೇಂದ್ರದಲ್ಲಿ ಹಿಂದುಳಿದ ವರ್ಗಗಳ ಮೀಸಲು ಸಿಗಬೇಕು. ಈ ಬಗ್ಗೆ ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳಿಸಿದೆ. ಸಂಪುಟ ಅನುಮೋದನೆ ನೀಡಿ ಕಳಿಸಿಕೊಟ್ಟರೆ ಎಲ್ಲರಿಗೂ ಕೇಂದ್ರ ಒಪಿಸಿ ಪಟ್ಟಿಯಲ್ಲಿ ಸ್ಥಾನ ಸಿಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇವೆಂದರು.
ಮೀಸಲಾತಿ ಹೆಚ್ಚಳ ಮಾಡಬೇಕು. ರಾಜ್ಯದಲ್ಲಿ ಸದ್ಯ ಶೇ.56ರಷ್ಟು ಮೀಸಲಾತಿ ಇದೆ. 2ಸಿ, 2ಡಿ ಮಾಡುವಾಗ ಹೆಚ್ಚಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಬದಲಿಗೆ ಇನ್ನೊಂದು ಸಮುದಾಯದ ಮೀಸಲಾತಿ ಕಿತ್ತು ಕೊಟ್ಟಿದ್ದಕ್ಕೆ ನ್ಯಾಯಾಲಯಕ್ಕೆ ಹೋದರು. ಹಿಂದುಳಿದ ವರ್ಗಗಳ ಮೀಸಲು ಪ್ರಮಾಣ ಹೆಚ್ಚಿಸಿದಲ್ಲಿ ವೀರಶೈವ ಲಿಂತಾಯತರಿಗೆ ಸಾಮಾಜಿಕ ನ್ಯಾಯ ಸಿಗಲಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಕಾನೂನು ಚೌಕಟ್ಟಿನಲ್ಲಿ ಮುಂದುವರೆಯುತ್ತೇವೆಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ವಿಪ ಸದಸ್ಯ ಸಿ.ಟಿ.ರವಿ ಹೇಳಿಕೆ ಬಗ್ಗೆ ಗೊತ್ತಿಲ್ಲ. ಗೊತ್ತಿಲ್ಲದೇ ಮಾತನಾಡುವುದು ತಪ್ಪಾಗುತ್ತದೆಂದರು.