ಸಾವಿನಲ್ಲೂ ಸಾರ್ಥಕತೆ ಮೆರೆದ ಗೀತಾ

district koppal organdonation accident geetha
Published on

ಕೊಪ್ಪಳ: ಇತ್ತೀಚೆಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಭಾಗ್ಯನಗರದ ಮಹಿಳೆಯೊಬ್ಬರ ಮೆದುಳು ನಿಷ್ಕ್ರಿಯಗೊಂಡಿದ್ದು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ.

ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಸರ್ಕಾರಿ ಪ್ರೌಢ ಶಾಲೆ ಗಣಿತ ಶಿಕ್ಷಕ ಸಂಗನಗೌಡ ಗೌಡರ್​ ಪತ್ನಿ ಗೀತಾ (43) ಅಂಗಾಂಗ ದಾನ ಮಾಡಿದವರು. ಮೂಲತ@ ಕೊಪ್ಪಳ ತಾಲೂಕಿನ ಹಲಿಗೇರಾ ಗ್ರಾಮದ ಇವರು ಸದ್ಯ ಭಾಗ್ಯನಗರದಲ್ಲಿ ನೆಲೆಸಿದ್ದಾರೆ. ದಂಪತಿ ಹಿರಿಯ ಪುತ್ರಿ ಮೂಡಬಿದರೆಯಲ್ಲಿ ಅಭ್ಯಾಸ ಮಾಡುತ್ತಿದ್ದು, ಡಿ.15ರ ಭಾನುವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಗೀತಾ ಹೋಗಿದ್ದರು. ರಾತ್ರಿ ವಾಪಸ್​ ಕೊಪ್ಪಳಕ್ಕೆ ಬರುವಾಗ ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರ ಪೈಕಿ ಗೀತಾ ತಾಯಿ ಸುಲೋಚನಾ (63) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೀತಾ ಗಂಭೀರ ಗಾಯಗೊಂಡರೆ, ಇವರ ಪತಿ ಸಂಗನಗೌಡ ಹಾಗೂ ಕಿರಿಯ ಪುತ್ರಿ ವೇದಿಕಾಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಕೋಮಾಗೆ ಜಾರಿದ್ದ ಗೀತಾ ಅವರನ್ನು ಶಿವಮೊಗ್ಗಾದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಗ್ಯ ಸುಧಾರಣೆ ಆಗದ ಕಾರಣ ಕಳೆದೆರೆಡು ದಿನದ ಹಿಂದೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ವೈದ್ಯರ ಪ್ರಯತ್ನ ವಿಲವಾಗಿದ್ದು, ಮೆದುಳು ನಿಷ್ಕ್ರಿಯಗೊಂಡಿದೆ.

ವಿಷಯ ತಿಳಿದ ಕುಟುಂಬದವರು ಅಂಗಾಂಗ ದಾನ ಮಾಡಿದ್ದು, ಕಿಡ್ನಿ, ಹೃದಯ, ಕಣ್ಣು, ಲಿವರ್​ ನೀಡಿದ್ದಾರೆ. ಅವುಗಳನ್ನು ಏಳು ಜನರಿಗೆ ಯಶಸ್ವಿಯಾಗಿ ಅಳವಡಿಸಿದ್ದು ಅವರೆಲ್ಲ ಪುನರ್ಜನ್ಮ ಪಡೆದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಹೂ ಸಮರ್ಪಿಸಿ ಗೀತಾಗೆ ನಮನ ಸಲ್ಲಿಸಿದ್ದಾರೆ. ಸೋಮವಾರ ಮೃತದೇಹ ಭಾಗ್ಯನಗಕ್ಕೆ ಬಂದಿದ್ದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ ಹಾಗೂ ಕುಟುಂಬದವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net