

ಕೊಪ್ಪಳ: ಬೇಸಿಗೆ ಹಿನ್ನೆಲೆ ಪ್ರತಿ ಕುಟುಂಬಕ್ಕೆ ನರೇಗಾದಡಿ 60 ದಿನಗಳ ಕೂಲಿ ಕೆಲಸ ನೀಡಲಾಗುವುದೆಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ. ತಿಳಿಸಿದರು.
ತಾಲೂಕಿನ ಹಲಗೇರಾ ಗ್ರಾಮದ ಪುಟ್ಟಪ್ಪನ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
ನರೇಗಾ ಗ್ರಾಮೀಣ ಭಾಗದ ಬಡವರಿಗೆ ವರವಾಗಿದೆ. ಉದ್ಯೋಗ ಚೀಟಿ ಹೊಂದಿದ ಕುಟುಂಬಗಳಿಗೆ 60 ದಿನಗಳ ಕೂಲಿ ಕೆಲಸ ನೀಡಲಾಗುವುದು. ಪ್ರತಿಯೊಬ್ಬರು 370ರೂ. ಕೂಲಿ ಮೊತ್ತ ಬರುವಂತೆ ಕೆಲಸ ಮಾಡಿ. ಬೇಸಿಗೆ ಕಾರಣ ಕೆಸದಲ್ಲಿ ಶೇ.30ರಷ್ಟು ವಿನಾಯಿತಿ ನೀಡಲಾಗಿದೆ. ಕೂಲಿ ಮೊತ್ತವೂ ಹೆಚ್ಚಿದ್ದು ಅನುಕೂಲವಾಗಿದೆ. ಕೆಲಸಕ್ಕೆ ಬರುವಾಗ ನಿಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬನ್ನಿ ಎಂದು ಸಲಹೆ ನೀಡಿದರು.
ಮಹಿಳಾ ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಬಳಿಕ ಕೂಸಿನ ಮನೆಗೆ ತೆರಳಿ ವೀಸಿದರು. ಮಕ್ಕಳಿಗೆ ನೀಡುವ ಊಟ, ಆಟಿಕೆ ಪರಿಶೀಲಿಸಿದರು. ಆರೋಗ್ಯ ತಪಾಸಣೆ ನಡೆಸುವಂತೆ ತಿಳಿಸಿದರು. ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಪಿಡಿಒ ಅಶೋಕ ರಾಂಪುರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡ, ತಾಂತ್ರಿಕ ಸಹಾಯಕ ಪ್ರವಿಣ ಗದಗ ಇತರರಿದ್ದರು.