

ಕೊಪ್ಪಳ: ಪ್ರಸ್ತುತ ಎಲ್ಲರೂ ಒಂದಿಲ್ಲೊಂದು ಒತ್ತಡದಲ್ಲಿ ಬದುಕುತ್ತಿದ್ದೇವೆ. ಒತ್ತಡ ರಹಿತವಾಗಿ ಆರೋಗ್ಯಯುತ ಜೀವನ ನಮ್ಮದಾಗಿಸಿಕೊಳ್ಳೋಣ ಎಂದು ಚಿಕ್ಕಬೊಮ್ಮನಾಳ ಗ್ರಾಪಂ ಪಿಡಿಒ ಅಂದಿಗಲ್ಲಪ್ಪ ಹೆಳಿದರು.
ತಾಲೂಕಿನ ಚಿಕ್ಕಬೊಮ್ಮನಾಳದಲ್ಲಿ ಶುಕ್ರವಾರ ನರೇಗಾ ಕೂಲಿಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಣದಿಂದ ವಸ್ತುಗಳನ್ನು ಖರೀದಿಸಬಹುದು. ಆರೋಗ್ಯವನ್ನಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕೆ ನೀಡುವ ಆದ್ಯತೆ ಆರೋಗ್ಯಕ್ಕೂ ನೀಡಿ. ಇಂದಿನ ಆಹಾರ, ಜೀವನ ಕ್ರಮದಿಂದ ಅನೇಕ ರೋಗಗಳು ಬರುತ್ತಿವೆ. ಆದ್ದರಿಂದ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ವೈದ್ಯರು ನೀಡುವ ಸಲಹೆ ಪಾಲಿಸಿ. ಮನೆಯ ಸುತ್ತ ಗಿಡ&ಮರಗಳಿರುವಂತೆ ನೋಡಿಕೊಳ್ಳಿ. ಉತ್ತಮ ಪರಿಸರ ಹೊಂದಿ. ಆರೋಗ್ಯ ಕಾಪಾಡಿಕೊಂಡು ನೆಮ್ಮದಿ ಜೀವನ ಸಾಗಿಸಿ ಎಂದರು.
ಹಿರೇಬೊಮ್ಮನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿ ಕಟ್ಟಿಮನಿ ಮಾತನಾಡಿ, ಪ್ರತಿಯೊಬ್ಬರು ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಜ್ವರ, ಕೆಮ್ಮು, ನೆಗಡಿ ಇತ್ತಿರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ರ್ನಿಲಸಬೇಡಿ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದವರು ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ತಾಪಂ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿದರು. ಗ್ರಾಪಂ ಸದಸ್ಯ ಹನುಮೇಶ ಓಬಳೆಪ್ಪನವರ, ಹಿರಿಯ ಆರೋಗ್ಯ ನಿರೀಕ್ಷಕ ವಿಜಯ ವಿಠ್ಠಲ್, ಸಮುದಾಯ ಆರೋಗ್ಯಾಧಿಕಾರಿ ಪ್ರಕಾಶ ಹಂದ್ರಾಳ, ತಾಂತ್ರಿಕ ಸಹಾಯಕ ರಫೀಕ್ಸಾಬ್, ಗ್ರಾಪಂ ಕಾರ್ಯದರ್ಶಿ ಯಮನೂರಪ್ಪ, ಕರವಸೂಲಿಗಾರ ನಬೀಸಾಬ, ಆಶಾ ಕಾರ್ಯಕರ್ತೆಯರಾದ ಲಲಿತಾ, ಚನ್ನಮ್ಮ ಗುಳೆದ, ಮಲ್ಲಮ್ಮ ತಳವಾರ, ಬೇರ್ಪೂಟ್ ಟೆಕ್ನಿಷಿಯನ್ ಮಾರುತಿ, ಡಿಇಒ ಹುಲಗೇಶ ಚೌಡ್ಕಿ ಇದ್ದರು.