

ಕೊಪ್ಪಳ: ತಾಲೂಕಿನ ಬಹಾದ್ದೂರಬಂಡಿ, ಮುದ್ದಾಬಳ್ಳಿ, ಚುಕ್ಕನಕಲ್, ಕುಣಿಕೇರಿ ಸೇರಿ ಇತರ ಹತ್ತಾರು ಹಳ್ಳಿಗಳನ್ನು ಸಂಪರ್ಕಿಸಲು ಎನ್ಎಚ್ 60ರಲ್ಲಿ ಸೇತುವೆ ನಿರ್ಮಿಸಿಲ್ಲ. ಅವೈಜ್ಞಾನಿಕವಾಗಿ ಯೂ ರ್ಟನ್ ನಿರ್ಮಿಸಿದ್ದು, ನಿತ್ಯ ಅಪಘಾತಗಳು ಸಂಭವಿಸಿ ಜನರು ಸಾಯುತ್ತಿದ್ದಾರೆ. ಕೂಡಲೇ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಬಹದ್ದೂರಬಂಡಿ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ತಿಳಿಸಿದರು.
ಹೊಸಪೇಟೆ&ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಕೊಪ್ಪಳ ಹೊರ ಹೊಲಯದಲ್ಲಿ ಬೈ ಪಾಸ್ ನೀಡಿದ್ದಾರೆ. ಆದರೆ, ಕೊಪ್ಪಳದಿಂದ ಇತರ ಗ್ರಾಮ ಸಂಪರ್ಕಿಸುವ ರಸ್ತೆಗಳಿಗೆ ಸೇತುವೆ ನಿರ್ಮಿಸಿಲ್ಲ. ಹಾಲವರ್ತಿ, ಸಿಂದೋಗಿ ರಸ್ತೆ ಬಿಟ್ಟರೆ ಬಾಕಿ ರಸ್ತೆಗಳಿಗೆ ಸೇತುವೆಗಳಿಲ್ಲ. ಬದಲಿಗೆ ಅಲ್ಲಲ್ಲಿ ಯೂ ರ್ಟನ್ ನಿರ್ಮಿಸಿದ್ದಾರೆ. ಹತ್ತಾರು ಗ್ರಾಮಗಳು, ಕೇಂದ್ರಿಯ ವಿದ್ಯಾಲಯ, ಕಾಲೇಜು ಎಲ್ಲಕ್ಕೂ ಹೆದ್ದಾರಿ ದಾಟಿ ತೆರಳಬೇಕು. ಸೇತುವೆ ಇಲ್ಲದೇ ಅಪಘಾತಗಳು ಹೆಚ್ಚುತ್ತಿವೆ. ಕಳೆದ ಮೂರು ವರ್ಷದಲ್ಲಿ 11 ಪ್ರಕರಣ ದಾಖಲಾಗಿದ್ದು, ಐವರು ಸಾವಪ್ಪಿದ್ದಾರೆ. ಆದರೆ, ಕೈ&ಕಾಲು ಕಳೆದುಕೊಂಡವರು, ಕೋಮಾಗೆ ಜಾರಿದವರ ಸಂಖ್ಯೆ ಹೆಚ್ಚಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಈ ಬಗ್ಗೆ ಈ ಹಿಂದೆ ಸಂಸದರಿಗೆ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ. ಹಾಲಿ ಸಂಸದ ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೂ ಸಲ್ಲಿಸುತ್ತೇವೆ. ತಕ್ಷಣ ಸೇತುವೆ ಮಂಜೂರಿಗೆ ಕ್ರಮ ಕೈಗೊಂಡು ಜನರ ಪ್ರಾಣ ಉಳಿಸಬೇಕು. ಇಲ್ಲದಿದ್ದರೆ ಬಾಧಿತ ಗ್ರಾಮಸ್ಥರೆಲ್ಲ ಸೇರಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆಂದು ಹೇಳಿದರು. ಗ್ರಾಮಸ್ಥರಾದ ಚಾಂದಪಾಷಾ ಕಿಲ್ಲೇದಾರ, ಚಂದ್ರುಸ್ವಾಮಿ ಹೊಸಮನಿ, ಆರ್.ಎಚ್.ಅತ್ತನೂರ, ದಾದಾಪೀರ ಮಂಡಲಗೇರಿ, ಮಹಮ್ಮದ ರಫೀಕ್ ಹಿರೇಮಸೂತಿ ಇದ್ದರು.