ಕೊಪ್ಪಳ: ತಾಲೂಕಿನ ನಂದಿಬಂಡಿ ಬಸವೇಶ್ವರ ಜಾತ್ರೋತ್ಸವ ಆ.14ರಿಂದ 19ವರೆಗೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಹಾಲಳ್ಳಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರತಿ ವರ್ಷ ಶ್ರಾವಣ ಸೋಮವಾರದಂದು ಜಾತ್ರೋತ್ಸವ ನಡೆಯುತ್ತದೆ. ಕೊಪ್ಪಳ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದಿರುವ ನಂದಿಬಂಡಿ ಬಸವೇಶ್ವರ ರಾಜ್ಯಾದ್ಯಂತ ಅಪಾರ ಭಕ್ತವೃಂದ ಹೊಂದಿದೆ. ಹ್ಯಾಟಿ, ಮೆಳ್ಳಿಕೇರಿ, ಮುಂಡರಗಿ ಹಾಗೂ ಲಾಚನಕೇರಿ ಗ್ರಾಮಸ್ಥರು ಕೂಡಿ ಜಾತ್ರೆ ಆಚರಿಸುತ್ತೇವೆ. ನಿತ್ಯ ಒಂದೊಂದು ಗ್ರಾಮದ ಭಕ್ತರಿಂದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಆ.14ರಂದು ಹ್ಯಾಟಿ ಗ್ರಾಮಸ್ಥರು ಮೂರ್ತಿ, ಕಳಸ ಮೆರವಣಗೆ ನಡೆಸುವರು. 15ರಂದು ಲಾಚನಕೇರಿ ಗ್ರಾಮದವರು ತೇರಿನ ಹಗ್ಗ, ರಥೋತ್ಸವ ಕಳಸ ತರುವರು.
16ಕ್ಕೆ ಮೆಳ್ಳಿಕೇರಿ ಭಕ್ತರು ಪಲ್ಲಕ್ಕಿ, ಬಸವಣ್ಣ ಮೂರ್ತಿ ತರುವರು. 17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಲು ರಧೋತ್ಸವ ಇರಲಿದೆ. 18ರಂದು ಮಹಾರಥೋತ್ಸವ ಜರುಗುವುದು. 18 ಮತ್ತು 19ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಮಿ, ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ ಜನಪ್ರತಿನಿಧಿಗಳು ಭಾಗಿಯಾಗುವರು. ಇಂದಿನಿಂದ ಜಾತ್ರೆ ಮುಗಿವವರೆಗೂ ಭಕ್ತರಿಗೆ ಪ್ರಸಾದ ಸೇವೆ ಇರಲಿದೆ ಎಂದು ಮಾಹಿತಿ ನೀಡಿದರು.
ಟ್ರಸ್ಟಿಗಳಾದ ನೀಲಪ್ಪ ಹೊಸಮನಿ, ಕೀರಶೆಟ್ಟರ್, ಬಸವರಾಜ ಕಟ್ಟಿ, ಮಾರುತಿ ಬುಕ್ಕಮ್ಮನವರ, ಪರಮೇಶ ರಡ್ಡಿ ಇದ್ದರು.