

ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲೆಯಲ್ಲಿ ಪ್ರತ್ಯೇಕ ಪುರಾತತ್ವ ಕಚೇರಿ ಹಾಗೂ ವಸ್ತುಸಂಗ್ರಹಾಲಯ ಆರಂಭ ಕಾಲ ಸನ್ನಿಹಿತವಾಗಿದೆ. ನಗರದ ಹಳೇ ಎಸಿ ಕಚೇರಿ ಕಟ್ಟಡ ಶ್ರೀವೇ ಮ್ಯೂಸಿಯಂ ಆಗಿ ಬದಲಾಗಲಿದೆ.
ಹೌದು, ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಆನೆಗೊಂದಿ ಭಾಗವಿದೆ. ಇನ್ನು ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಅನೇಕ ಸ್ಮಾರಕಗಳು, ಕಟ್ಟಡಗಳು, ಕೋಟೆಗಳು ಬರುತ್ತವೆ. ಭಾರತೀಯ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯಡಿ ಗಂಗಾವತಿ ತಾಲೂಕಿನ ಹಿರೇ ಬೆಣಕಲ್ನ ಮೊರೆರ ಬೆಟ್ಟ ಸೇರಿವೆ. ಈ ಪ್ರದೇಶ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾಗಿದೆ. ಪೂರಕವಾಗಿ ಪ್ರವಾಸಿಗರನ್ನು ಸೆಳೆವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಬೆಟ್ಟಕ್ಕೆ ಭೇಟಿ ನೀಡಿದಾಗ ಕೊಪ್ಪಳಕ್ಕೆ ಪ್ರತ್ಯೇಕ ಪುರಾತತ್ವ ಕಚೇರಿ ಆರಂಭಿಸುವ ಭರವಸೆ ನೀಡಿದ್ದರು.
ಪೂರಕವಾಗಿ ಜಿಲ್ಲಾಡಳಿತವೂ ಕೋಟೆ ಪ್ರದೇಶದಲ್ಲಿ ಮ್ಯೂಸಿಯಂ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆರಂಭದಲ್ಲಿ ಹೊಸಪೇಟೆ ರಸ್ತೆಯಲ್ಲಿನ ಜಿಲ್ಲಾಡಳಿತ ಭವನದಲ್ಲಿ ಪುರಾತತ್ವ ಉಪ ನಿರ್ದೇಶಕರ ಕಚೇರಿಗೆ ಕೊಠಡಿ ನಿಗದಿಪಡಿಸಲಾಯಿತು. ಆದರೆ, ಮ್ಯೂಸಿಯಂ ಬೇರೆಡೆ ಆರಂಭಿಸಿದರೆ ಆಡಳಿತ ಮತ್ತು ವಸ್ತುಸಂಗ್ರಹಾಲಯ ನೋಡಿಕೊಳ್ಳಲು ಸಿಬ್ಬಂದಿ ಇನ್ನಿತರ ಸಮಸ್ಯೆಗಳು ಎದುರಾಗಲಿವೆ. ಹೀಗಾಗಿ ನಗರದ ಗಡಿಯಾರ ಕಂಬ ಸಮೀಪದಲ್ಲಿ ಹಳೇ ಎಸಿ ಕಚೇರಿ ಕಟ್ಟಡವಿದೆ. ಈ ಮೊದಲು ಕೊಪ್ಪಳ ವಿವಿ ವಿಜ್ಞಾನ ವಿಭಾಗದ ಪ್ರಯೋಗಾಲಯವನ್ನು ಇಲ್ಲಿ ನಡೆಸಲಾಗುತ್ತಿತ್ತು. ಸದ್ಯ ವಿವಿ ಕುಕನೂರು ತಾಲೂಕಿನ ತಳಕಲ್ಗೆ ಸ್ಥಳಾಂತರಗೊಂಡಿದೆ.
ಆಗಿನಿಂದ ಕಟ್ಟಡ ಖಾಲಿಯಾಗಿದೆ. ಸಾಕಷ್ಟು ಕೊಠಡಿಗಳಿವೆ. ಬಳಕೆ ಇಲ್ಲದ ಕಾರಣ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಕಸ ಬಿದ್ದಿದೆ. ಹಳೇ ಮಾದರಿ ಕಟ್ಟಡವಾಗಿದ್ದು, ಮ್ಯೂಸಿಯಂ ಮಾಡಲು ಸೂಕ್ತವಾಗಿದೆ. ಸ್ಮಾರಕ ಮಾದರಿಯಲ್ಲೂ ಕಾಣಲಿದೆ. ಇಲ್ಲಿಯೇ ಕಚೇರಿ ಹಾಗೂ ವಸ್ತು ಸಂಗ್ರಹಾಲಯ ಆರಂಭಿಸುವುದರಿಂದ ಆಡಳಿತವೂ ಸುಲಭವಾಗಲಿದೆ. ಹೀಗಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಸ್ವತ@ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ಕಚೇರಿ ಹಾಗೂ ಮ್ಯೂಸಿಯಂ ಆರಂಭಕ್ಕೆ ಸೂಕ್ತವಾಗಿದ್ದು, 20 ವರ್ಷಕ್ಕೆ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ.
ಆಗಬೇಕಿದೆ ಕ್ರಿಯಾ ಯೋಜನೆ
ಈ ಮೊದಲು ಕೋಟೆ ಪ್ರದೇಶ ಅಭಿವೃದ್ಧಿ ಜತೆಗೆ ಅಲ್ಲಿಯೇ ಮ್ಯೂಸಿಯಂ ಸ್ಥಾಪನೆಗೆ ಜಿಲ್ಲಾಡಳಿತ ಯೋಜಿಸಿತ್ತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಡಿ ಕ್ರಿಯಾ ಯೋಜನೆ ಸಿದ್ಧಪಡಿಸಲು ಮುಂದಾಗಿತ್ತು. ಕಚೇರಿ ಆರಂಭ ಬಳಿಕ ಅಗತ್ಯತೆ ನೋಡಿಕೊಂಡು ಕೆಕೆಆರ್ಡಿಬಿ ಹಾಗೂ ಪುರಾತತ್ವ ಇಲಾಖೆಯಿಂದ ಅನುದಾನ ಪಡೆಯಲು ಯೋಜಿಸಿದೆ. ಕಚೇರಿ ವಿಭಾಗ, ವಸ್ತುಸಂಗ್ರಹಾಲಯ ಮಾದರಿ ಇನ್ನಿತರ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಪುರಾತತ್ವ ಇಂಜಿನಿಯರ್ಗಳು ಯೋಜನೆ ಹಾಕಿಕೊಂಡಿದ್ದಾರೆ. ಒಂದೆರಡು ದಿನದಲ್ಲಿ ಕಚೇರಿ ಹಸ್ತಾಂತರಗೊಳ್ಳಲಿದ್ದು ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.