ಮುನಿರಾಬಾದ್​ ರೈಲು ನಿಲ್ದಾಣ ಲೋಕಾರ್ಪಣೆ

district koppal munirabad railway station pm modi mp hitnal
Published on

ಕೊಪ್ಪಳ: ಅಮೃತ ಭಾರತ್​ ಸ್ಟೇಷನ್​ ಯೋಜನೆಯಡಿ ಮರು ಅಭಿವೃದ್ಧಿಗೊಂಡ ಮುನಿರಾಬಾದ್​ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆಗೊಳಿಸಿದರು.

18.40 ಕೋಟಿ ರೂ.ನಲ್ಲಿ ನಿಲ್ದಾಣ ನವೀಕರಣಗೊಂಡಿದೆ. ಜಿ+1 ಕಟ್ಟಡವಿದ್ದು, ಅತ್ಯಾಧುನಿಕ ಮೂಲ ಸೌಕರ್ಯ ಹೊಂದಿದೆ. ಪಾರ್ಕಿಂಗ್​, ನಿರೀಕ್ಷಣಾ ಕೊಠಡಿ, ಜಲ ಸಂರಕ್ಷಣೆ, ಸೌರಶಕ್ತಿ ಸೌಕರ್ಯ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಬಡವರಿಗೆ ಕಡಿಮೆ ಖರ್ಚಿನಲ್ಲಿ ಸಾರಿಗೆ ಸೇವೆ ಲಭಿಸಲಿದೆ. ಕೇಂದ್ರ ಸರ್ಕಾರ ನಿಲ್ದಾಣಗಳ ಉನ್ನತಿಕರಣ ಮಾಡುತ್ತಿದೆ. ಮುನಿರಾಬಾದ್​ ನಿಲ್ದಾಣ ಅಮೃತ್​ ಸ್ಟೇಷನ್​ ಯೋಜನೆಯಡಿ ಮರು ಅಭಿವೃದ್ಧಿಯಾಗಿದೆ. ಹುಲಿಗಿಗೆ ಆಗಮಿಸುವ ಭಕ್ತರಿಗೆ ಅನುಕೂಲವಾಗಿದೆ. ಇನ್ನಷ್ಟು ಕಾಮಗಾರಿಗಳು ಆಗಬೇಕಿದ್ದು, ಬೋರ್ಡ್​ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಲ್ದಾಣಕ್ಕೆ ಹುಲಿಗೆಮ್ಮ ದೇವಿ ಹೆಸರಿಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೇತುವೆ ಕಾಮಗಾರಿ ಸಾಗಿದ್ದು ಶ್ರೀವೇ ಮುಕ್ತಾಯಗೊಳ್ಳಲಿದೆ. ಅಂಜನಾದ್ರಿ&ಅಯೋಧ್ಯೆಗೆ ವಿಶೇಷ ರೈಲು ಬೇಡಿಕೆ ಇದ್ದು, ಇಲಾಖೆಗೆ ಮನವಿ ಮಾಡಿರುವೆ. ಮಾಜಿ ಸಂಸದ ಸಂಗಣ್ಣ ಕರಡಿ ಅವರ ಕೊಡುಗೆಯೂ ಇದೆ. ಗಂಗಾವತಿ&ಬಾಗಲಕೋಟೆ, ಗಂಗಾವತಿ&ದರೋಜಿ ರೈಲು ಮಾರ್ಗಕ್ಕೆ ಅನುದಾನ ಕೋರಲಾಗಿದೆ. ಕೊಪ್ಪಳದಲ್ಲಿ ಸ್ವಾಮಿ ವಿವೇಕಾನಂದ, ಕೆಇಬಿ ರೈಲ್ವೆ ಸೇತುವೆಗಳಗೆ ಟೆಂಡರ್​ ಕರೆದಿದ್ದು ಶ್ರೀ ಕಾಮಗಾರಿ ಮುಗಿಯಲಿದೆ ಎಂದರು.

ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಮುನಿರಾಬದ್​ ನಿಲ್ದಾಣ ನವೀಕರಣಗೊಂಡಿದ್ದು ಈ ಭಾಗದ ಜನರಿಗೆ ಖುಷಿ ತಂದಿದೆ. ರೈಲ್ವೆ ಜಾಲ ವಿಸ್ತರಣೆಯಿಂದ ಸಾರಿಗೆ, ಸಂಪರ್ಕಕ್ಕೆ ಅನುಕೂಲ. ಮುಂದೆ ಜಿಲ್ಲೆಯಲ್ಲಿ ಟ್ರಂಕ್​ ರೂಟ್​ ವ್ಯವಸ್ಥೆಯಾಗಲಿದೆ. ನಿಲ್ದಾಣ ಅಭಿವೃದ್ಧಿಯಿಂದ ಹುಲಿಗಿ, ಮುನಿರಾಬಾದ್​ ಭಾಗಕ್ಕೆ ಬರುವ ಪ್ರವಾಸಿಗರಿಗೆ ಉಪಕಾರಿ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಮುನಿರಾಬಾದ್​ ಹೆಚ್ಚು ದಟ್ಟಣೆ ಇರುವ ನಿಲ್ದಾಣ. ಅಮೃತ ಭಾರತ ಸ್ಟೇಷನ್​ ಯೋಜನೆಯಡಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ 103 ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ವಿಶೇಷ ಸೌಲಭ್ಯ ಹೊಂದಿದ್ದು ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಲಾಖೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪದ್ಮಶ್ರೀ ಭೀಮವ್ವ ಶಿಳ್ಳಿಕ್ಯಾತರ, ಹುಲಗಿ ಗ್ರಾಪಂ ಅಧ್ಯೆ ನೀಲಮ್ಮ ಗುಂಗಾಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಿಇಒ ಎಂ.ಎಚ್​.ಪ್ರಕಾಶರಾವ್​, ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯ ವಿಭಾಗೀಯ ವ್ಯವಸ್ಥಾಪಕ ಡಾ.ಅನೂಪ್​ ಆಳ್ವಾ ಇತರರಿದ್ದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ : ವೇದಿಕೆಯಲ್ಲಿ ಜನಪ್ರತಿನಿಧಿಗಳಲ್ಲದೇ ಇತರ ಕಾಂಗ್ರೆಸ್​ ನಾಯಕರನ್ನು ಕೂರಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಬೇಕು. ಕೇಂದ್ರ ಸರ್ಕಾರದ ಕಾರ್ಯಕ್ರಮವಿದು. ರಾಜಕಾರಣ ಮಾಡುವ ವೇದಿಕೆಯಲ್ಲವೆಂದು ರೈಲ್ವೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಅರ್ಧಕ್ಕೆ ಹೊರ ನಡೆದರು. ಬಳಿಕ ನಿಲ್ದಾಣ ಮುಂಭಾಗದಲ್ಲಿ ಕಾಂಗ್ರೆಸ್​ ವಿರುದ್ಧ ಘೋಷಣೆ ಕೂಗಿದರು. ಸಣ್ಣಪುಟ್ಟ ತಪ್ಪಾಗಿದ್ದರೆ ಸರಿಪಡಿಸುವುದಾಗಿ ಸಂಸದ ರಾಜಶೇಖರ ಹಿಟ್ನಾಳ ಭಾಷಣದಲ್ಲಿ ತಿಳಿಸಿದರು. ಪಿಎಂ ನಿಲ್ದಾಣ ಉದ್ಘಾಟನೆ ಮಾಡುವ ವೇಳೆಗೆ ಭಾಷಣ ಮುಗಿಸಿದ ಸಂಸದ ಹಿಟ್ನಾಳ ಹಾಗೂ ಕಾಂಗ್ರೆಸ್​ ನಾಯಕರು ಕಾರ್ಯಕ್ರಮದಿಂದ ನಿರ್ಗಮಿಸಿದರು. ಬಳಿಕ ಬಿಜೆಪಿ ನಾಯಕರು, ಕಾರ್ಯಕರ್ತರು ಕಾರ್ಯಕ್ರವಮ ಮಗಿವವರೆಗೂ ಇದ್ದು ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net