

ಕೊಪ್ಪಳ: ತಾಲೂಕಿನ ಮುನಿರಾಬಾದ್ ರೈಲ್ವೆ ನಿಲ್ದಾಣ ಕೇಂದ್ರ ಸರ್ಕಾರದ ಅಮೃತ್ ನಿಲ್ದಾಣ ಯೋಜನೆಗೆ ಆಯ್ಕೆಯಾಗಿದ್ದು,ಫೆ.26ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಭೂಮಿಪೂಜೆ ನೆರವೇರಿಸಲಿದ್ದಾರೆ.
ಜಿಲ್ಲೆಯ ಕೊಪ್ಪಳ ರೈಲ್ವೆ ನಿಲ್ದಾಣ ಹಾಗೂ ಮುನಿರಾಬಾದ್ ನಿಲ್ದಾಣಗಳು ಯೋಜನೆಗೆ ಆಯ್ಕೆಯಾಗಿವೆ. ಈಗಾಗಲೇ ಕೊಪ್ಪಳ ನಿಲ್ದಾಣ ಕಾಮಗಾರಿ ಆರಂಭಗೊಂಡು ಪ್ರಗತಿಯಲ್ಲಿದೆ. ಇದೀಗ ಮುನಿರಾಬಾದ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹುಲಿಗಿ-ಮುನಿರಾಬಾದ್ ನಿಲ್ದಾಣ ಒಂದೇ ಆಗಿದ್ದು, ಹುಣ್ಣಿಮೆ ಸೇರಿ ವಿಶೇಷ ದಿನಗಳಂದು ಹುಲಿಗಿಗೆ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಾರೆ. ಅನ್ಯರಾಜ್ಯದ ಭಕ್ತರು ಹೆಚ್ಚಾಗಿ ರೈಲು ಪ್ರಯಾಣ ಅವಲಂಬಿಸಿದ್ದಾರೆ.
ಹೀಗಾಗಿ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದೆ. 20 ಕೋಟಿ ರೂ. ಮಂಜೂರಾಗಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿರಲಿದೆ. ಇದರ ಜತೆಗೆ ರೈಲ್ವೆ ಮೆಲ್ಸೇತುವೆಯೂ ಮಂಜೂರಾಗಿದ್ದು, ಅದಕ್ಕೂ ಪ್ರಧಾನಿ ಭೂಮಿಪೂಜೆ ನೆರವೇರಿಸುವರು. ಈ ಮೂಲಕ ಬಹುದಿನದ ಬೇಡಿಕೆಗಳು ಈಡೇರಿದಂತಾಗಲಿವೆ.