ಎರಡನೇ ಬೆಳೆಗೆ ನೀರು ಡಿ.1ರಿಂದ, ಸಚಿವ ಶಿವರಾಜ ತಂಗಡಗಿ ಹೇಳಿಕೆ

district koppal munirabad minister shivaraj tangadagi icc meet tb dam
Published on

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹಿಂಗಾರು ಬೆಳೆಗೆ ನೀರು ಡಿ.1ರಿಂದ ನೀರು ಹರಿಸಲಾಗುವುದೆಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಜಲಾಶಯದಲ್ಲಿ 97 ಟಿಎಂಸಿ ಅಡಿ ನೀರು ಲಭ್ಯವಿದೆ. ಹಿಂಗಾರು ಬೆಳೆಗೆ ನೀರಿನ ಕೊರತೆ ಇಲ್ಲ. ಹೀಗಾಗಿ ಸಲಹಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು, ರೈತರು ಹಾಗೂ ಅಧಿಕಾರಿಗಳ ಸಲಹೆ ಪಡೆದು ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ. ನಿಗದಿತ ದಿನದಂದು ನಾಲೆಗಳಿಗೆ ನೀರು ಬಿಡುಗಡೆ ಆಗಲಿದೆ. ಕಳೆದ ಆಗಸ್ಟ್​ನಲ್ಲಿ ಜಲಾಶಯದ 19ನೇ ಕ್ರಸ್ಟ್​ ಗೇಟ್​ ಕಟ್​ ಆಗಿ ಸಾಕಷ್ಟು ನೀರು ಪೋಲಾಯಿತು. ಸಮರೋಪಾದಿಯಲ್ಲಿ ಸರಿಪಡಿಸುವ ಕೆಲಸ ಮಾಡಿ 30&35 ಟಿಎಂಸಿ ಅಡಿ ನೀರು ಉಳಿಸಿದ್ದೇವೆ. ಸಿಎಂ ಹಾಗೂ ಡಿಸಿಎಂ ರೈತರಿಗೆ ಕೊಟ್ಟ ಭರವಸೆಯಂತೆ ಎರಡನೇ ಬೆಳೆಗಳಿಗೆ ನೀರು ಕೊಡುತ್ತಿದ್ದೇವೆ ಎಂದು ಗುರುವಾರ ಬೆಂಗಳೂರಿನಲ್ಲಿ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿಸೆಂಬರ್​ 1ರಿಂದ 15ವರೆಗೆ 1,500 ಕ್ಯೂಸೆಕ್​, ಡಿ.16ರಿಂದ 31ವರೆಗೆ 2,000 ಕ್ಯೂಸೆಕ್​, 2025ರ ಜನೆವರಿ 1ರಿಂದ ಮಾರ್ಚ್​ 31ವರೆಗೆ 3,800 ಕ್ಯೂಸೆಕ್​ನಂತೆ ನೀರು ಹರಿಸಲಾಗುವುದು. ಜತೆಗೆ 2025ರ ಏಪ್ರೀಲ್​ 1ರಿಂದ 10ವರೆಗೆ ಕುಡಿವ ನೀರಿಗಾಗಿ 1,650 ಕ್ಯೂಸೆಕ್​ ಬಿಡುಗಡೆ ಮಾಡಲಾಗುವುದು. ಎಡದಂಡ ವಿಜಯನಗರ ಕಾಲುವೆಗೆ 2025ರ ಏಪ್ರೀಲ್​ 11ರಿಂದ ಮೇ 10ವರೆಗೆ 150 ಕ್ಯೂಸೆಕ್​ನಂತೆ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 10ವರೆಗೆ ನೀರು ನಿಲುಗಡೆ ಆಗಿದೆ. ಬಳಿಕ ಡಿ.11ರಿಂದ 31ವರೆಗೆ 800 ಕ್ಯೂಸೆಕ್​ನಂತೆ, 2025ರ ಜನೆವರಿ 1ರಿಂದ 10ವರೆಗೆ ಪುನ@ ನೀರು ನಿಲುಗಡೆಯಾಗಲಿದೆ. 2025ರ ಜನೆವರಿ 11ರಿಂದ 31ವರೆಗೆ 800 ಕ್ಯೂಸೆಕ್​ ನೀರು ಹರಿಸಲಾಗುವುದು.

ಬಲದಂಡೆ ಕೆಲ ಮಟ್ಟದ ಕಾಲುವೆಗೆ ಡಿ.1ರಿಂದ 15ವರೆಗೆ 400 ಕ್ಯೂಸೆಕ್​, ಡಿ.16ರಿಂದ 31ವರೆಗೆ 600, 2025ರ ಜನೆವರಿ 1ರಿಂದ ೆಬ್ರವರಿ 28ವರೆಗೆ 650 ಹಾಗೂ ಮಾರ್ಚ್​ 1ರಿಂದ 31ವರೆಗೆ 700 ಕ್ಯೂಸೆಕ್​ ನೀರು ದೊರೆಯಲಿದೆ. ರಾಯ, ಬಸವ ಕಾಲುವೆಗೆ ಡಿ.10ರಿಂದ 2025ರ ಜನೆವರಿ 10ವರೆಗೆ ನೀರು ನಿಲುಗಡೆ. ಜ.11ರಿಂದ ಮೇ 31ವರೆಗೆ 250 ಕ್ಯೂಸೆಕ್​ ಮತ್ತು ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 25 ಕ್ಯೂಸೆಕ್​ನಂತೆ ಅಥವಾ ಜಲಾಶಯ ಮಟ್ಟ 1585 ಅಡಿ ತಲುಪುವವರೆಗೆ ನೀರು ಬಿಡುಗಡೆ ಮಾಡಲಾಗುವುದೆಂದು ವಿವರಿಸಿದರು.

ಸಚಿವ ಎನ್​.ಎಸ್​.ಬೋಸರಾಜ್​, ಮುನಿರಾಬಾದ್​ ಕಾಡಾ ಅಧ್ಯಕ್ಷ ಹಸನ್​ಸಾಬ್​ ದೋಟಿಹಾಳ, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ತುರ್ವಿಹಾಳ, ವಿಪ ಸದಸ್ಯರಾದ ಶರಣೇಗೌಡ ಬಯ್ಯಾಪುರ, ಬಸನಗೌಡ ಬಾದರ್ಲಿ, ಕೊಪ್ಪಳ, ಬಳ್ಳಾರಿ, ವಿಜಯನಗರ ರಾಯಚೂರು ಸಂಸದ, ಶಾಸಕರು, ವಿಪ ಸದಸ್ಯರು, ಅಧಿಕಾರಿಗಳು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net