

ಕೊಪ್ಪಳ: ರಾಜ್ಯ ಹಾಗೂ ಕೇಂದ್ರ ಸರ್ಕಾರ ರೂಪಿಸಿದ ನಿಯಮಾವಳಿ ಅನುಸಾರ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತುಂಗಭದ್ರಾ ಮಂಡಳಿ ಗುತ್ತಿಗೆ ಕಾರ್ಮಿಕರ ಸಂದ ಸದಸ್ಯರು ತಾಲೂಕಿನ ಮುನಿರಾಬಾದ್ ಟಿಬಿ ಬೋರ್ಡ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಕಾಯ್ದೆಗಳು ಸರಿಯಾಗಿ ಪಾಲನೆ ಆಗುತ್ತಿಲ್ಲ. ಗುತ್ತಿಗೆದಾರರು ವೇತನ ಸರಿಯಾಗಿ ಪಾವತಿಸತ್ತಿಲ್ಲ. ಭವಿಷ್ಯ ನಿಧಿ, ಇಎಸ್ಐ ಸೌಲಭ್ಯಕ್ಕೆ ಕಡಿತ ಮಾಡಿದ ಹಣದ ಮಾಹಿತಿ ನೀಡುತ್ತಿಲ್ಲ. ಕೆಲ ಕಾರ್ಮಿಕರಿಗೆ ನ್ಯಾಯಯುತವಾಗಿ ನೀಡಬೇಕಾದ ಸೌಲಭ್ಯ ನೀಡುತ್ತಿಲ್ಲ. ಹಲವು ಬಾರಿ ಈ ಬಗ್ಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಸರ್ಕಾರವೂ ಕಣ್ಮುಚ್ಚಿ ಕುಳಿತಿದೆ. ಇದರಿಂದ ನಾವೆಲ್ಲ ಸಂಕಷ್ಟ ಅನುಭವಿಸುತ್ತಿದ್ದೇವೆ. ಹತ್ತಾರು ವರ್ಷಗಳಿಂದ ಸೇವೆ ಮಾಡುತ್ತಿದ್ದು ಸೌಲಭ್ಯ ಸಿಗದೆ ಪರದಾಡುವಂತಾಗಿದೆ. ವೇತನ ಬಾರದೆ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಹೊರಡಿಸಿರುವ ಗುತ್ತಿಗೆ ಕಾರ್ಮಿಕರ ವೇತನ ನೀಡಿ. 2023&24, 2024&25ರಲ್ಲಿ ಸರ್ಕಾರ ಹೆಚ್ಚಿಸಿದ ತುಟ್ಟಿ ಭತ್ಯೆ ಮೊತ್ತವನ್ನು ತಕ್ಷಣ ಪಾವತಿಸಬೇಕು. ಐದು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಂಡಳಿಯ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಪಿ.ಎಂ.ಚನ್ನಬಸವನಗೌಡ ಅವರಿಗೆ ವೇತನ ತಾರತಮ್ಯವಾಗಿದ್ದು, ತಕ್ಷಣ ಸರಿಪಡಿಸಬೇಕು. ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಗುರುತಿನ ಚೀಟಿ ಸೇರಿ ಇತರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂದ ಗೌರವ ಅಧ್ಯಕ್ಷ ಪಂಪಾಪತಿ ರಾಟಿ, ಅಧ್ಯಕ್ಷ ಬಿ.ದಿವಾಕರ್, ಪ್ರ.ಕಾ.ಶ್ರೀರಾಮು, ಮಂಜುನಾಥ, ಹನುಮಂತ ಇತರರಿದ್ದರು.