ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಬಿಜೆಪಿ ತೊರೆದೆ, ಸಂಸದ ಸಂಗಣ್ಣ ಕರಡಿ ಹೇಳಿಕೆ

mp sanganna karadi joins congress koppal
Published on

ಕೊಪ್ಪಳ: ಬಿಜೆಪಿಯಲ್ಲಿ ಟಿಕೆಟ್​ ಹಂಚಿಕೆಯಲ್ಲಿ ಸೌಜನ್ಯಕ್ಕೂ ನನ್ನ ಅಭಿಪ್ರಾಯ ಕೇಳಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನನ್ನ ಮಗ ಹಾಗೂ ಸೊಸೆಗೆ ಟಿಕೆಟ್​ ನೀಡುವ ವಿಷಯದಲ್ಲೂ ನನ್ನನ್ನು ವಿಲನ್​ ಮಾಡಿದರು. ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿರುವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ನನ್ನನ್ನು ಆತ್ಮೀಯವಾಗಿ ಕಾಂಗ್ರೆಸ್​ಗೆ ಕರೆದುಕೊಂಡಿದ್ದಾರೆ. ಬಿಜೆಪಿ ಸಮಾವೇಶದಲ್ಲಿ ನನ್ನನ್ನು ಟೀಕಿಸಿದ್ದಾರೆ. ರಾಜಕಾರಣದಲ್ಲಿ ಇವೆಲ್ಲ ಸಹಜ. ಅದನ್ನು ಸ್ವಾಗತಿಸುವೆ. ಪಕ್ಷ ಕುಟುಂಬದಂತಿರಬೇಕು. ಬಿಜೆಪಿಯಲ್ಲಿ ಆ ವಾತಾವರಣ ಇಲ್ಲ. ಟಿಕೆಟ್​ ನೀಡುವುದು, ಬಿಡುವುದು ಬೇರೆ. ಆದರೆ, ಪಕ್ಷಕ್ಕಾಗಿ ಅಷ್ಟು ವರ್ಷ ದುಡಿದಿದ್ದೇನೆ. ಸೌಜನ್ಯಕ್ಕೂ ನನ್ನೊಡನೆ ಮಾತನಾಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಪಕ್ಷ ತೊರೆದೆ ಎಂದು ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪಕ್ಷ ತೊರೆಯಲು ಕಾರಣ ತಿಳಿಸಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಕೇಳದೆ ಸಿ.ವಿ.ಚಂದ್ರಶೇಖರಗೆ ಟಿಕೆಟ್​ ಕೊಟ್ಟರು. ಬಳಿಕ ನನ್ನ ಮಗನಿಗೆ ನೀಡಿದರು. 2023ರಲ್ಲಿ ಎಲ್ಲ ಕಾರ್ಯಕರ್ತರು ನನಗೆ ಟಿಕೆಟ್​ ನೀಡುವಂತೆ ಮನವಿ ಮಾಡಿದರು. 8 ದಿನಗಳ ಬಳಿಕ ಬೇರೊಬ್ಬ ಪಂಚಮಸಾಲಿ ನಾಯಕರಿಗೆ ಕೊಡುವುದಾಗಿ ಹೇಳಿದರು. ನಂತರ ಶೋಭಾ ಕರಂದ್ಲಾಜೆ ಕರೆ ಮಾಡಿ ನನ್ನ ಸೊಸೆಗೆ ನೀಡಿದರು. ಯಾಕೆ ಹೀಗೆ ಮಾಡಿದರೆಂದು ಗೊತ್ತಿಲ್ಲ. ನನ್ನನ್ನು ಎಲ್ಲರ ದೃಷ್ಟಿಯಲ್ಲಿ ವಿಲನ್​ ಮಾಡಿದರು. ಇವೆಲ್ಲ ಬೆಳವಣಿಗೆಗಳಿಂದ ನೋವಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಬಳಿ ಲೋಕಸಭಾ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿರುವೆ. ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆದ್ದೆ ಗೆಲ್ಲುತ್ತಾರೆ. ರೈಲ್ವೆ, ನೀರಾವರಿ, ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆ, ವಿಮಾನ ನಿಲ್ದಾಣ ಸೇರಿ ಇತರ ಕೆಲಸಗಳಾಗಬೇಕು. ನಾನು ವೈಯಕ್ತಿಕವಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. 1978ರಲ್ಲಿ ನನಗೆ ಎಚ್​.ಜಿ.ರಾಮುಲು ಕಾಂಗ್ರೆಸ್​ ಟಿಕೆಟ್​ ನೀಡಿದ್ದರು. ಅಂದಿನಿಂದ ಕಾಂಗ್ರೆಸ್​ನೊಂದಿಗೆ ನಂಟಿದೆ ಎಂದು ಕಾಂಗ್ರೆಸ್​ ಮನೆ ತಮಗೆ ಹೊಸದಲ್ಲ ಎಂಬುದನ್ನು ಸಮರ್ಥಿಸಿಕೊಂಡರು. ಶಾಸಕ ರಾವೇಂದ್ರ ಹಿಟ್ನಾಳ ಇದ್ದರು.

ಸಿ.ಟಿ.ರವಿ ಅವರು ಬುದ್ಧಿವಂತ. ಪಕ್ಷದ ಚಿಹ್ನೆ ಮೇಲೆ ಚುನಾವಣೆ ಮಾಡುವಂತಿದ್ದರೆ ಅಭ್ಯರ್ಥಿ ಯಾಕೆ ಬೇಕು. ಪಕ್ಷದಲ್ಲಿ ಇದ್ದಾಗ ತತ್ವ&ಸಿದ್ದಾಂತ ಬಗ್ಗೆ ಮಾತನಾಡಬೇಕಾಗುತ್ತದೆ. ಜತೆಗೆ ಲೋಪದೋಷಗಳನ್ನು ಪ್ರಶ್ನಿಸಬೇಕು. ನಾನು ಎರಡನ್ನೂ ಮಾಡಿರುವೆ. ನನ್ನ ಬಗ್ಗೆ ಮಾತನಾಡಿದ ನಾಯಕರಿಗೆಲ್ಲ ಒಳ್ಳೆಯದಾಗಲಿ. ಸಂಗಣ್ಣ ಕರಡಿ. ಸಂಸದ.

ಸಂಗಣ್ಣ ಕರಡಿ. ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net