

ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ನಡೆದಿದೆ. ಇನ್ನೊಂದು ತಿಂಗಳಲ್ಲಿ 19ನೇ ಗೇಟ್ ಅಳವಡಿಕೆ ಆಗಲಿದೆ. ರೈತರು ಆತಂಕಪಡಬೇಕಿಲ್ಲವೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕಳೆದ ವರ್ಷ ಆ.10ರಂದು ಗೇಟ್ ತುಂಡಾಗಿದೆ. ಸರ್ಕಾರ ಸಮರೋಪಾದಿಯಲ್ಲಿ ಸ್ಟಾಪ್ ಲಾಗ್ ಗೇಟ್ ಅಳವಡಿಸಿ ನೀರು ನಿಲ್ಲಿಸಿದೆ. ಸದ್ಯ 19ನೇ ಗೇಟ್ ಅಳವಡಿಕೆ ಟೆಂಡರ್ ಮುಗಿದಿದ್ದು ಕಾರ್ಯ ನಡೆದಿದೆ. ಇನ್ನೊಂದು ತಿಂಗಳಲ್ಲಿ ಗೇಟ್ ಅಳವಡಿಕೆ ಆಗಲಿದೆ. ಬಾಕಿ 32 ಗೇಟ್ಗಳಿಗೆ ಟೆಂಡರ್ ಕರೆಯಲಾಗಿದೆ. ಅದಕ್ಕೆ 15 ತಿಂಗಳು ಸಮಯವಕಾಶ ಹಿಡಿಯಲಿದೆ. ತಜ್ಞ ಕನ್ನಯ್ಯ ನಾಯ್ಡು ಎಲ್ಲ ಗೇಟ್ ಶಕ್ತಿ ಕಳೆದುಕೊಂಡಿದ್ದು 80 ಟಿಎಂಸಿ ಅಡಿ ನೀರು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಟಿಬಿ ಬೋರ್ಡ್ ಹಾಗೂ ಕೇಂದ್ರ ಜಲ ಆಯೋಗ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೂಳಿಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ಆಗಿದೆ. ಹಾಗೆಂದು ಜಲಾಶಯ ನಿರ್ಮಿಸಬೇಕೆಂದಿಲ್ಲ. ಸಾಧ್ಯಾಸಾಧ್ಯತೆಗಳ ಬಗ್ಗೆ ತಜ್ಞರು ಅವಲೋಕಿಸಲಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ರೈತರು ಗೊಂದಲಕ್ಕೀಡಾಗುವುದು ಬೇಡ. ಸರ್ಕಾರ ನಿರಂತರ ಸಮಾಲೋಚನೆ ನಡೆಸಿದ್ದು ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯುತ್ತಿದೆ. ಈ ಭಾಗದ ಜನಪ್ರತಿನಿಧಿಗಳು ಬೋಡ್ ಸಂಪರ್ಕದಲ್ಲಿದ್ದು ಆದಷ್ಟು ಬೇಗ ಗೇಟ್ ಅಳವಡಿಕೆ ಮಾಡಿಸು ಶ್ರಮಿಸುತ್ತಿದ್ದೇವೆಂದು ಮಾಹಿತಿ ನೀಡಿದರು.