ಹೆದ್ದಾರಿಗೆ ಸೇತುವೆ ನಿರ್ಮಾಣ, ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ

district koppal mp rajashekhar hitnal nhai railway works
Published on

ಕೊಪ್ಪಳ: ನಾನು ಸಂಸದನಾಗಿ ಒಂದು ವರ್ಷವಾಗಿದ್ದು ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಹೆದ್ದಾರಿಗೆ ಸೇತುವೆ ನಿರ್ಮಾಣ, ರೈಲ್ವೆ ಕಾಮಗಾರಿಗಳು ಪ್ರಗತಿ ಕಂಡಿವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಎನ್​ಎಚ್​ 50ರಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದವು. ವರ್ಷಕ್ಕೆ 100 ಸಾವು ಸಂಭವಿಸುತ್ತಿದ್ದವು. ಮಾಜಿ ಸಂಸದ ಸಂಗಣ್ಣ ಕರಡಿ ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ್ದರು. ನಾನು ಸಂಸದನಾದ ಮೇಲೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರುವೆ. ಹೊಸಲಿಂಗಾಪುರ ಕ್ರಾಸ್​, ಹೊಸಳ್ಳಿ ಕ್ರಾಸ್​, ಹಿಟ್ನಾಳ್​ ಕ್ರಾಸ್​ ಮೆತಗಲ್​ ಕ್ರಾಸ್​ ಬಳಿ 11.90 ಕೋಟಿ ರೂ. ಮೊತ್ತದಲ್ಲಿ ಸೇತುವೆ ನಿರ್ಮಾಣವಾಗುತ್ತಿವೆ. ವಾಹನ ವೇಗ ನಿಯಂತ್ರಣಕ್ಕೆ ಸೆಕ್ಯೂರಿಟಿ ಸಿಸ್ಟಮ್​ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೇಂದ್ರ ಸಾರಿಗೆ ಸಚಿವ ನಿತೀನ್​ ಗಡ್ಕರಿ ಕಾಮಗಾರಿಗೆ ಅನುಮೋದಿಸಿ ಸಹಕರಿಸಿದ್ದಾರೆ. ಅಂಚೆ ಇಲಾಖೆ ಅನೇಕ ಸೇವೆ ಒದಗಿಸುತ್ತಿದೆ. ಜಿಲ್ಲೆಯಲ್ಲಿ 182 ಅಂಚೆ ಕಚೇರಿಗಳಿದ್ದು, ಎಲ್ಲವಕ್ಕೂ ಒಂದೇ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಈಗಾಗಲೇ ಕುಣಿಕೇರಿ, ಹಿರೇ ಬಗನಾಳದಲ್ಲಿ ವಿವಿಧ ಕಂಪನಿಗಳ ಸಿಎಸ್​ಆರ್​ ನಿಧಿಯಡಿ ಕಾಮಗಾರಿ ಆರಂಭಿಸಲಾಗಿದೆ ಎಂದರು.

ನರೇಗಾದಡಿ ಕಾಮನೂರು, ಮೋರನಾಳ ದತ್ತು ಪಡೆದು ಅಭಿವೃದ್ಧಿ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಕುಷ್ಟಗಿ ತಾಳುಕಿನ ಹುಯಿಲಗೇರಿ, ಮುದೇನೂರು, ಗಂಗಾವತಿ ತಾಲೂಕಿನ ಸಂಗಾಪುರ, ಕಾರಟಗಿ ತಾಲೂಕಿಬ ಬೆನ್ನೂರು, ಕಕ್ಕರಗೋಳ, ಯಲಬುರ್ಗಾ ತಾಲೂಕಿನ ಹಿರೇ ಮ್ಯಾಗೇರಿ, ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮಗಳನ್ನು ದತ್ತು ಗ್ರಾಮಗಳಾಗಿ ಆಯ್ಕೆ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಸ್ಮಾರ್ಟ್​ ಕ್ಲಾಸ್​ ಮಾಡುತ್ತಿದ್ದೇವೆ. ಎಲ್ಲ ಶಾಲೆಗಳಿಗೆ ಬಿಎಸ್​ಎನ್​ಎಲ್​ ಸಂಪರ್ಕ ಜಾಲ ಕಲ್ಪಿಸಲಾಗುವುದು. ಸದ್ಯ 43 ಶಾಲೆಗಳಿಗೆ ಸಂಪರ್ಕ ದೊರೆತಿದೆ. ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧಿ, ಗಂಗಾವತಿ ನಿಲ್ದಾಣಕ್ಕೆ ಕಿಷ್ಕಿಂಧಾ, ಮುನಿರಾಬಾದ್​ ನಿಲ್ದಾಣಕ್ಕೆ ಹುಲಿಗೆಮ್ಮದೇವಿ ಹೆಸರಿಡಲಾಗಿದೆ. ಹುಲಿಗಿ ಸಮಗ್ರ ಅಭಿವೃದ್ಧಿಗೆ ಕೇಂದ್ರದ ಪ್ರಸಾದ್​&2 ಯೋಜನಗೆ 169 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆಂದು ತಿಳಿಸಿದರು.

ಸಿಂಧನೂರಿಗೆ ಕೇಂದ್ರಿಯ ವಿದ್ಯಾಲಯ

ಸಿಂಧನೂರಿಗೆ ಕೇಂದ್ರಿಯ ವಿದ್ಯಾಲಯ ಮಂಜೂರಾಗಿದೆ. ಬಾಗಲಕೋಟೆ&ಗಂಗಾವತಿ ಹೊಸ ರೈಲು ಮಾರ್ಗಕ್ಕೆ ಅನುಮೋದನೆ ದೊರೆತಿದೆ. ಸಂಸದರ ನಿಧಿಯಡಿ ರಸ್ತೆ ಅಭಿವೃದ್ಧಿಯಾಗಿದೆ. ಉಪ ಪ್ರಾದೇಶಿಕ ಕೇಂದ್ರದಲ್ಲಿ ತಾತ್ಕಾಲಿಕ ಕೌಶಲಾಭಿವೃದ್ಧಿ ಕೇಂದ್ರ ನಿಮಾರ್ಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪವರ್​ ಗ್ರಿಡ್​ ಕಾಪೋರ್ರೇಷನ್​ ಸಿಎಸ್​ಆರ್​ ನಿಧಿಯಡಿ ಎರಡು ಮಾದರಿ ಶಾಲೆಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದೇವೆ. ಎನ್​ಎಚ್​ 150ಎ ನಲ್ಲಿ 23.88 ಕೋಟಿ ರೂ.ನಲ್ಲಿ ಗುಡದೂರ, ರಂಗಾಪೂರ, ಮುದ್ದಾಪೂರ ಕ್ರಾಸ್​, ಎಲೆಕುಡ್ಲಗಿ, ಬಸಾಪೂರ, ಕಲ್ಲೂರ ಮತ್ತು ಸಿಂಧನೂರಗಳಲ್ಲಿ ಸೇತುವೆ ನಿರ್ಮಿಸುತ್ತಿದ್ದೇವೆ. ನಬಾರ್ಡ್​ 4 ಕೋಟಿ ರೂ.ನಲ್ಲಿ ಮೆತಗಲ್​ ಬಳಿ ಆಹಾರ ಸಂಸ್ಕರಣಾ ಟಕ ನಿರ್ಮಿಸಲಾಗುವುದೆಂದು ಸಂಸದ ಹಿಟ್ನಾಳ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net