ಶಾಲೆ ಸ್ಥಳಾಂತರ ಬೇಡ

district koppal moulana azad school close parants aoopse
Published on

ಕೊಪ್ಪಳ: ನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹೊಸ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಮೌಲಾನ ಆಜಾದ್​ ಶಾಲೆ ಸ್ಥಳಾಂತರಿಸಲು ಶಿಕ್ಷಣಾಧಿಕಾರಿಗಳು ಮುಂದಾಗಿದ್ದಾರೆ. ಬೇರೆಡೆ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ಈಗಿರುವ ಸ್ಥಳದಲ್ಲೇ ಶಾಲೆ ಮುಂದುವರಿಸಬೇಕೆಂದು ಪಾಲಕರು ಆಗ್ರಹಿಸಿದರು.

ಎಂಎಚ್​ಪಿಎಸ್​ ಶಾಲೆ ಕಟ್ಟಡ ಹಳೆಯದಾಗಿದೆ. ಹೈಟೆಕ್​ ಶಾಲೆ ನಿರ್ಮಿಸಲು ಅನುದಾನ ಮೀಸಲಿಡಲಾಗಿದೆ. ಹೊಸ ಕಟ್ಟಡ ನಿರ್ಮಾಣ ದೃಷ್ಟಿಯಿಂದ ಇತ್ತೀಚೆಗೆ ಶಾಲಾ ಆವರಣದಲ್ಲಿನ 32 ಮರಗಳನ್ನು ಕಡಿಯಲಾಗಿದೆ. ಇದೀಗ ಮೌಲನಾ ಆಜಾದ್​ ಶಾಲೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ. ಈ ಹಿಂದೆ ದಿಡ್ಡಿಕೇರಿಯಲ್ಲಿ ಮಕ್ಕಳನ್ನು ಹಾಕಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಶಾಸಕರ ಮಾದರಿ ಶಾಲೆ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾಗಿದೆ. ಕಟ್ಟಡಗಳು ಉತ್ತಮವಾಗಿದ್ದು, ವಿಶಾಲ ಮೈದಾನವಿದೆ. ಮಕ್ಕಳು ಸುರಕ್ಷವಾಗಿದ್ದಾರೆ. ಹೀಗಾಗಿ ಬೇರೆಡೆ ಸ್ಥಳಾಂತರಿಸುವುದು ಬೇಡವೆಂದು ಒತ್ತಾಯಿಸಿದರು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಅಜ್ಮೀರ್​ ಅಲಿ ಮಾತನಾಡಿ, ಬಾಲಕರ ಪ್ರೌಢ ಶಾಲೆ ಆವರಣದಲ್ಲಿ ಮೌಲನಾ ಆಜಾದ್​ ಶಾಲೆಗೆ ಜಾಗ ಮೀಸಲಿರಿಸಲಾಗಿದೆ. ಈಗಾಗಲೇ ನಾಲ್ಕು ಕಟ್ಟಡ ನಿರ್ಮಿಸಲಾಗಿದೆ. ಬಾಕಿ ಕಟ್ಟಡ ನಿರ್ಮಿಸಬೇಕಿದೆ. ಇಲ್ಲಿ ಹೊಸ ಕಟ್ಟಡ ನಿರ್ಮಿಸುವ ಹಿನ್ನೆಲೆಯಲ್ಲಿ ಸ್ಥಳಾಂತರಕ್ಕೆ ಸೂಚಿಸಿದ್ದಾರೆ. ನಿಮ್ಮೆಲ್ಲರ ಒತ್ತಾಯದಂತೆ ಇಲ್ಲಿಯೇ ಶಾಲೆ ಮುಂದುವರೆಸುವಂತೆ ಮೇಲಧಿಕಾರಿಗಳಿಗೆ ತಿಳಿಸುವೆ. ಪೂರ್ಣ ಪ್ರಮಾಣದಲ್ಲಿ ಹೊಸ ಕೊಠಡಿಗಳು ನಿರ್ಮಾಣವಾದ ನಂತರ ಸ್ಥಳಾಂತರ ಮಾಡಿಕೊಳ್ಳುವುದಾಗಿ ಗಮನಕ್ಕೆ ತರುವೆ ಎಂದು ಭರವಸೆ ನೀಡಿದರು. ಪಾಲಕರಾದ ಮುನೀರ್​ ಸಿದ್ದಿಕಿ, ಅಯೂಬ್​ ಅಡ್ಡೇವಾಲೆ, ಸಲೀಂ ಖಾದ್ರಿ, ಎಸ್​.ಎ.ಗಾರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net