ಮೊಹರಂಗೆ ಸಂಭ್ರಮದ ತೆರೆ, ಗಮನ ಸೆಳೆದ ದೇವರ ಮೆರವಣಿಗೆ

moharam last day celebration koppal
ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಬುಧವಾರ ಮೊಹರಂ ಕೊನೆಯ ದಿನ ಅಂಗವಾಗಿ ಅಲಾಯಿ ದೇವರ ಮೆರವಣಿಗೆ ನಡೆಸಲಾಯಿತು.
Published on

ಕೊಪ್ಪಳ: ಭಾವೈಕ್ಯತೆ ಹಬ್ಬವಾದ ಮೊಹರಂ ಕೊನೇ ದಿನ ಅಂಗವಾಗಿ ಬುಧವಾರ ನಗರ ಸೇರಿ ತಾಲೂಕಿನ ಭಾಗ್ಯನಗರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಂಭ್ರಮ ಕಂಡಬಂತು. ಅಲಾಯಿ ದೇವರ ಆರಾಧನೆ ಎಲ್ಲೆಡೆ ನಡೆಯಿತು.

ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರು ಬುಧವಾರ ಬೆಳಗ್ಗಯೇ ಸವಾರಿ ಹೋಗಿ ಬಂದವು. ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ನಮಿಸಿ ಇಷ್ಟಾರ್ಥ ಪೂರೈಸುವಂತೆ ಬೇಡಿಕೊಂಡರು. ಕೆಂಪು ಸಕ್ಕರೆ, ಹೂವಿನ ಹಾರ ನೈವೆದ್ಯ ಅರ್ಪಿಸಿದರು. ಅಲಾಯಿ ಕುಣಿಯಲ್ಲಿ ಕಟ್ಟಿಗೆ, ಉಪ್ಪು ಹಾಕಿ ಭಕ್ತಿ ಮೆರೆದರು. ಕೊನೆಯ ದಿನವಾದ ಕಾರಣ ಸಂಜೆಯಾಗುತ್ತಲೇ ಸಿಂಗಾರಗೊಂಡ ದೇವರುಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟವು. ಜನರು ದಾರಿಯುದ್ದಕ್ಕು ತಂಡೋಪ ತಂಡಾಗಿ ನಿಂತುಕೊಂಡು ಅಂತಿಮ ದರ್ಶನ ಪಡೆದು ಪುನೀತರಾದರು.

ಗ್ರಾಮೀಣ ಭಾಗದಲ್ಲಿ ಉತ್ತಮ ಮಳೆ&ಬೆಳೆ ಬರಲೆಂದು ಜನರು ಬೇಡಿಕೊಂಡರು. ಅಲಾಯಿ ಕುಣಿ ಮುಂದೆ ಹಲಗೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕೆಲವರು ಕೆಂಡ ಹಾಯ್ದು ಭಕ್ತಿ ಮೆರೆದರು. ಭಾಗ್ಯನಗರ ಪಟ್ಟಣದಲ್ಲಿ ಪ್ರತಿ ವರ್ಷ ವಿಶೇಷವಾಗಿ ವಿಜೃಂಭಣೆಯಿಂದ ಹಬ್ಬ ಆಚರಿಸುವುದು ವಾಡಿಕೆ. ಈ ವರ್ಷವೂ ಬೆಳಗ್ಗೆಯಿಂದೇ ಪಟ್ಟಣದಲ್ಲಿ ಹಬ್ಬದ ಸಡಗರ ಕಂಡುಬಂತು. ಜನರು ಮಸೀದಿಗೆ ತೆರಳಿ ದೈವದ ಕಾರ್ಯದಲ್ಲಿ ಭಾಗಿಯಾದರು. ಸಂಜೆ ಅಂತಿಮ ಮೆರವಣಿಗೆ ಮುಗಿದ ಬಳಿಕ ದೇವರನ್ನು ವಿಸರ್ಜಿಸಿ ಹಬ್ಬಾಚರಣೆಗೆ ತೆರೆ ಎಳೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net