ಪ್ರತಿ ಕುಟುಂಬಕ್ಕೆ 100 ದಿನ ಕೆಲಸ

district koppal mnrega visit zp ceo koppal
Published on

ಕೊಪ್ಪಳ: ಬೇಸಿಗೆ ಹಿನ್ನೆಲೆಯಲ್ಲಿ ನರೇಗಾದಡಿ ಅರ್ಹ ಕುಟುಂಬಗಳಿಗೆ 100 ದಿನಗಳ ಕೂಲಿ ಕೆಲಸ ನೀಡಲಾಗುವುದೆಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ತಿಳಿಸಿದರು.

ತಾಲೂಕಿನ ಲೇಬಗೇರಾ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ಎಲ್ಲರೂ 370 ರೂ. ಕೂಲಿ ಬರುವಂತೆ ಕೆಲಸ ಮಾಡಿ. ಬೇಸಿಗೆ ಕಾರಣ ಶೇ.30ರಷ್ಟು ಕೆಲಸದ ಪ್ರಮಾಣ ಕಡಿಮೆ ಮಾಡಲಾಗಿದೆ. ಕಳೆದ ವರ್ಷ 379ರೂ. ಕೂಲಿ ಇತ್ತು. ಈ ವರ್ಷ 370ರೂ. ಹೆಚ್ಚಿಸಲಾಗಿದೆ. ನೀವು ಮಾಡುವ ಕೆಲಸಕ್ಕೆ ಅನುಗುಣವಾಗಿ ಕೂಲಿ ಮೊತ್ತ ಸಿಗಲಿದೆ. ಕೆಲಸಕ್ಕೆ ಬರುವಾಗ ಮಕ್ಕಳನ್ನು ಕರೆತರಬೇಡಿ. ಬದಲಿಗೆ ಕೂಸಿನ ಮನೆಗೆ ಬಿಟ್ಟುಬನ್ನಿ ಎಂದು ಸಲಹೆ ನೀಡಿದರು.

ಮಹಿಳಾ ಕೂಲಿಕಾರರೊಂದಿಗೆ ಸಂವಾದ ನಡೆಸಿದ ಸಿಇಒ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಬರುವಂತೆ ತಿಳಿಸಿದರು. ಬಳಿಕ ಗ್ರಾಮದ ಕೂಸಿನ ಮನೆಗೆ ತೆರಳಿ ಮಕ್ಕಳ ದಾಖಲಾತಿ, ಕೇರ್​ ಟೇಕರ್ಸ್​ ಮಾಹಿತಿ ಪಡೆದರು. ನಿತ್ಯ 12 ಮಕ್ಕಳು ಕೂಸಿನ ಮನೆಗೆ ಬರುತ್ತಿದ್ದು ಬೆಳಗ್ಗೆ ಹಾಲು, ದಾಲ್​ಕಿಚಡಿ, ಮೊಟ್ಟೆ ನೀಡುವುದಾಗಿ ಸಿಬ್ಬಂದಿ ಮಾಹಿತಿ ನೀಡಿದರು. ಮಕ್ಕಳ ತೂಕ ಪರಿಶೀಲಿಸಿ. ದಾಖಲಾತಿ, ಆಹಾರ ದಾಸ್ತಾನು ವಹಿ ನಿರ್ವಹಿಸಲು ನಿರ್ದೇಶಿಸಿದರು.

ಬಳಿಕ ಸಂಸದರ ನರೇಗಾ ದತ್ತು ಗ್ರಾಮ ಕಾಮನೂರಿಗೆ ಭೇಟಿ ನೀಡಿ ಸಂಜಿವಿನಿ ಸಂಘದ ಶೆಡ್​ ಕಾಮಗಾರಿ, ಪಂಚಾಯತ್​ ರಾಜ್​ ಇಂಜನಿಯರಿಂಗ್​ ಇಲಾಖೆಯಿಂದ ನಿರ್ವಹಿಸುತ್ತಿರುವ ಸಿಸಿ ರಸ್ತೆ ಕಾಮಗಾರಿ ವೀಸಿದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಗ್ರಾಮಸ್ಥರೊಂದಿಗೆ ವೈಯಕ್ತಿಕ ಶೌಚಗೃಹ ಬಳಕೆ ಬಗ್ಗೆ ಚರ್ಚಿಸಿದರು. ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ತಾಪಂ ನಿರ್ದೇಶಕ ಯಂಕಪ್ಪ, ಪಿಡಿಒ ಸಂಗಮೇಶ ತೇರಿನ. ಎಡಿಪಿಸಿ ಮಹಾಂತಸ್ವಾಮಿ, ಎಂಐಎಸ್​ ಸಂಯೋಜಕ ಮೈನುದ್ದೀನ್​, ತೋಟಗಾರಿಕೆ ಅಧಿಕಾರಿ ಮಹಾಂತೇಶ ಹೊಟ್ಟಿನ, ನರೇಗಾ ಸಿಬ್ಬಂದಿ ದೇವರಾಜ ಪತ್ತಾರ, ಯಮನೂರ, ಕವಿತಾ, ಗ್ರಾಪಂ ಸದಸ್ಯರಾದ ನಾಗಪ್ಪ ದೊಡ್ಡಮನಿ, ಫಕೀರಗೌಡ ಗೊಲ್ಲರ, ಮಲ್ಲಪ್ಪ ತುಬಾಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net