ಕಾರ್ಖಾನೆ ವಿಸ್ತರಣೆ ಬೇಡ

district koppal mlc hemalatha mspl
Published on

ಕೊಪ್ಪಳ: ಈಗಾಗಲೇ 202ಕ್ಕೂ ಹೆಚ್ಚು ಕಾರ್ಖಾನೆಗಳಿಂದ ಜಿಲ್ಲೆಯಲ್ಲಿ ಮಾಲಿನ್ಯ ಹೆಚ್ಚಿದೆ. ಹೊಸದಾಗಿ 54ಸಾವಿರ ಕೋಟಿ ರೂ.ನಲ್ಲಿ ಎಂಎಸ್​ಪಿಎಲ್​ ಕಾರ್ಖಾನೆ ವಿಸ್ತರಿಸಿದಲ್ಲಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಈಗಾಗಲೇ ಚಿಕ್ಕಬಗನಾಳ, ಕಾಸನಕಂಡಿ, ಹಾಲವರ್ತಿ, ಕುಣಿಕೇರಿ, ಕರ್ಕಿಹಳ್ಳಿ, ಹ್ಯಾಟಿ ಇನ್ನಿತರ ಗ್ರಾಮಗಳು ಮಾಲಿನ್ಯದಿಂದ ನರಳುತ್ತಿವೆ. ಜನರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನೂ ಸಹ ಹಿಂದೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೆ. ಧೂಳಿನ ಪ್ರಮಾಣ ಹೆಚ್ಚಿದ್ದರಿಂದ ಯುವಕರಿಗೆ ಕನ್ಯೆ ಸಿಗದಂತ ಪರಿಸ್ಥಿತಿ ಇದೆ. ಇದು ಎಲ್ಲ ರಾಜಕಾರಣಿಗಳು, ಅಧಿಕಾರದಲ್ಲಿರುವವರ ಗಮನಕ್ಕಿದೆ. ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಅವರಿಗೂ ಎಲ್ಲವೂ ಗೊತ್ತಿದೆ ಎಂದರು.

ಬಲ್ಡೋಟಾ ಕಂಪನಿ 54 ಸಾವಿರ ಕೋಟಿ ರೂ. ನಲ್ಲಿ 10.05 ದಶಲಕ್ಷ ಟನ್​ ಉಕ್ಕು ಉತ್ಪಾದನಾ ಕಾರ್ಖಾನೆ ನಿರ್ಮಿಸಲು ಮುಂದಾಗಿದೆ. ಇದಕ್ಕೆ ಸರ್ಕಾರ ಅನುಮತಿಸಿದೆ. ನಗರಕ್ಕೆ ಹೊಂದಿಕೊಂಡು ಇಷ್ಟು ದೊಡ್ಡ ಪ್ರಮಾಣದ ಕೈಗಾರಿಕೆ ಮಾಡುವುದು ಸರಿಯಲ್ಲ. ಇದರಿಂದ ಜನರಿಗೆ ಸಮಸ್ಯೆ ಆಗಲಿದೆ. ಈ ಬಗ್ಗೆ ನಮ್ಮ ಪಕ್ಷ ಹೋರಾಟ ನಡೆಸಲಿದೆ. ನಾನು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್​, ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒಪ್ಪಂದ ಕೈ ಬಿಡಲು ಮನವಿ ಮಾಡುವೆ. ನಮ್ಮ ನಾಯಕರೊಂದಿಗೆ ಚರ್ಚಿಸಿ ಮುಂದಿನ ಹಂತದ ಹೋರಾಟ ರೂಪಿಸುವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net